ಟೋಲ್ ಪ್ಲಾಜಾಗಳ ಸಮೀಪದಲ್ಲಿ ವಾಸಿಸುವ ಜನರಿಗೆ ಕೇಂದ್ರ ಸರ್ಕಾರ ಸಂತಸದ ಸುದ್ದಿ ನೀಡಿದೆ. ರಾಜಮಾರ್ಗ ಯಾತ್ರಾ (Rajmarg Yatra) ಮೊಬೈಲ್ ಆ್ಯಪ್ನಲ್ಲಿ ‘ಲೋಕಲ್ ಪಾಸ್’ ಎಂಬ ಹೊಸ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ. ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ವಾಹನ ಸವಾರರನ್ನು ಆ್ಯಪ್ ಸ್ವಯಂಚಾಲಿತವಾಗಿ ಪರಿಶೀಲಿಸಿ, ಅವರಿಗೆ ಡಿಜಿಟಲ್ ಲೋಕಲ್ ಪಾಸ್ ನೀಡಲಿದೆ.
ಹೌದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಾಹನ ಸವಾರರಿಗೆ ಮತ್ತೊಂದು ಅನುಕೂಲಕರ ಸೇವೆಯನ್ನು ಆರಂಭಿಸಿದೆ. ಇನ್ನು ಮುಂದೆ ಟೋಲ್ ಪ್ಲಾಜಾಗಳ ಸಮೀಪದಲ್ಲಿ ವಾಸಿಸುವವರು ಮನೆಯಲ್ಲೇ ಕುಳಿತು ಡಿಜಿಟಲ್ ಲೋಕಲ್ ಪಾಸ್ ಪಡೆಯಬಹುದು. ಈ ಸೌಲಭ್ಯದಿಂದ ಟೋಲ್ ಪ್ಲಾಜಾದಿಂದ 20 ಕಿ.ಮೀ ವ್ಯಾಪ್ತಿಯೊಳಗೆ ವಾಸಿಸುವ ನಿವಾಸಿಗಳು ರಾಜಮಾರ್ಗ ಯಾತ್ರಾ ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ಪಾಸ್ ಪಡೆಯಬಹುದು.
ಈ ಡಿಜಿಟಲ್ ಲೋಕಲ್ ಪಾಸ್ ಒಂದು ತಿಂಗಳವರೆಗೆ ಮಾನ್ಯವಾಗಿದ್ದು, ಆ ಅವಧಿಯಲ್ಲಿ ಸಂಬಂಧಿತ ಟೋಲ್ ಪ್ಲಾಜಾದ ಮೂಲಕ ಎಷ್ಟು ಬಾರಿ ಬೇಕಾದರೂ ಸಂಚರಿಸಲು ಅವಕಾಶ ನೀಡುತ್ತದೆ. ಟೋಲ್ ಪ್ಲಾಜಾಗಳ ಸಮೀಪ ವಾಸಿಸುವ ವಾಹನ ಸವಾರರ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಮನೆಯಲ್ಲೇ ಲೋಕಲ್ ಪಾಸ್ ಪಡೆಯುವುದು ಹೇಗೆ ?
ಟೋಲ್ ಪ್ಲಾಜಾದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ವಾಹನ ಸವಾರರು ‘ರಾಜಮಾರ್ಗ ಯಾತ್ರಾ’ ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲೇ ಡಿಜಿಟಲ್ ಲೋಕಲ್ ಪಾಸ್ಗೆ ಅರ್ಜಿ ಸಲ್ಲಿಸಬಹುದು. ಈ ಪಾಸ್ ಮೂಲಕ ಒಂದು ತಿಂಗಳ ಕಾಲ ಸಂಬಂಧಿತ ಟೋಲ್ ಪ್ಲಾಜಾದಲ್ಲಿ ಅನಿಯಮಿತ ಬಾರಿ ಸಂಚರಿಸಬಹುದು.
ಇದಕ್ಕೂ ಮೊದಲು ಲೋಕಲ್ ಪಾಸ್ ಪಡೆಯಲು ವಾಹನ ಸವಾರರು ಟೋಲ್ ಪ್ಲಾಜಾಕ್ಕೆ ತೆರಳಿ ಗುರುತಿನ ಚೀಟಿ ಹಾಗೂ ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತಿತ್ತು. ಈ ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ಹಲವು ಬಾರಿ ಟೋಲ್ ಪ್ಲಾಜಾಕ್ಕೆ ತೆರಳಬೇಕಾಗುತ್ತಿತ್ತು. ಆದರೆ ಈಗ ಹೊಸ ಡಿಜಿಟಲ್ ವ್ಯವಸ್ಥೆಯಿಂದ ಸಂಪೂರ್ಣ ಪ್ರಕ್ರಿಯೆ ಆನ್ಲೈನ್ನಲ್ಲೇ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.
ಈ ಪಾಸ್ ಹೇಗೆ ಕಾರ್ಯನಿರ್ವಹಿಸುತ್ತದೆ?
‘ರಾಜಮಾರ್ಗ ಯಾತ್ರಾ’ ಆ್ಯಪ್ಗೆ ‘ಲೋಕಲ್ ಪಾಸ್’ ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಸದ್ಯ ಈ ಸೇವೆಯನ್ನು ದೆಹಲಿಯ ಅರ್ಬನ್ ಎಕ್ಸ್ಟೆನ್ಷನ್ ರೋಡ್-2 (UER-2) ಮೇಲಿರುವ ಮುಂಡ್ಕಾ-ಬಕ್ಕರ್ವಾಲಾ ಟೋಲ್ ಪ್ಲಾಜಾದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ದೇಶದಾದ್ಯಂತ ಇರುವ ಇತರೆ ಟೋಲ್ ಪ್ಲಾಜಾಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುತ್ತದೆ.
ಸ್ಥಳೀಯ ಪಾಸ್ಗೆ ಅರ್ಹತೆಯನ್ನು ಪರಿಶೀಲಿಸಲು GIS (Geographic Information System) ಆಧಾರಿತ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅರ್ಜಿದಾರರು ನಿಜವಾಗಿಯೂ ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯೊಳಗೆ ವಾಸಿಸುತ್ತಾರೆಯೇ ಎಂಬುದನ್ನು ಈ ತಂತ್ರಜ್ಞಾನ ದೃಢೀಕರಿಸುತ್ತದೆ. ಇದರಿಂದ ಸಂಪೂರ್ಣ ಪ್ರಕ್ರಿಯೆ ಹೆಚ್ಚು ಪಾರದರ್ಶಕ, ವೇಗವಾದ ಹಾಗೂ ನಿಖರವಾದ ರೀತಿಯಲ್ಲಿ ಪೂರ್ಣಗೊಳ್ಳಲಿದೆ.

