ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಪಿಡೆಂಟ್ ಗ್ರೂಪ್ ಚೇರ್ಮನ್ ಡಾ.ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್ ಐಟಿ ರಚನೆ ಮಾಡಲಾಗಿದೆ. ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕೂಡ ಈ ತಂಡದಲ್ಲಿ ಇರಲಿದ್ದಾರೆ ಎಂದು ತಿಳಿಸಿದರು.
ಸಿ.ಜೆ.ರಾಯ್ ಆತ್ಮಹತ್ಯೆಗೆ ನಿಖರ ಕಾರಣಗಳೇನು? ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ನಿಜಕ್ಕೂ ಐಟಿ ದಾಳಿ ಒತ್ತಡದಿಂದಲೇ ಆತ್ಮಹತ್ಯೆಗೆ ಶರಣಾದರೇ? ಅಥವಾ ಅವರ ಸಾವಿಗೆ ಬೇರೆ ಏನಾದರೂ ಕಾರಣವಿದೆಯೇ? ಡಿಸೆಂಬರ್ ನಲ್ಲಿಯೇ ಐಟಿ ದಾಳಿ ನಡೆದಿತ್ತು. ಐಟಿ ಅಧಿಕಾರಿಗಳ ವಿಚಾರಣೆ ಈಗಲೂ ಮುಂದುವರೆದಿತ್ತೇ? ರಾಯ್ ಅವರ ಆತ್ಮಹತ್ಯೆ ಬಗ್ಗೆ ಸಂಪೂರ್ಣ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಿದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ವಹಿಸಲಾಗುವುದು ಎಂದು ಹೇಳಿದರು.
ಕಾನ್ಪಿಡೆನ್ಸ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್, ಜನವರಿ 31ರಂದು ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಚೇಂಬರ್ ನಲ್ಲಿಯೇ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ದಕ್ಷಿಣ ಭಾರತದ ದೈತ್ಯ ಉದ್ಯಮಿಯ ಆತ್ಮಹತ್ಯೆ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿದೆ. ಐಟಿ ಅಧಿಕಾರಿಗಳು ಅವರ ಕಚೇರಿಗೆ ಆಗಮಿಸಿದ್ದ ವೇಳೆ 20 ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ತಮ್ಮ ಚೇಂಬರ್ ಗೆ ಹೋಗಿ ಬಾಗಿಲು ಹಾಕಿಕೊಂಡ ಸಿ.ಜೆ.ರಾಯ್ ಬಾಗಿಲು ತೆರೆದಿಲ್ಲ. 20 ನಿಮಿಷ ಬಿಟ್ಟು ಬಾಗಿಲು ಒಡೆದು ನೋಡಿದಾಗ ರಾಯ್ ಕುಳಿತ ಚೇರಿನಲ್ಲಿಯೇ ಮೃತಪಟ್ಟಿದ್ದರು. ಅವರ ಎದೆಗೆ ಗುಂಡು ಹಾರಿರುವುದು ಕಂಡುಬಂದಿತ್ತು. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ

