ಭಾರತದಲ್ಲಿ ವಿಶ್ವಕಪ್ ಟಿ-20 ಪಂದ್ಯಗಳನ್ನು ಆಡುವುದಿಲ್ಲ ಎಂದು ಹಠ ಹಿಡಿದಿದ್ದ ಬಾಂಗ್ಲಾದೇಶವನ್ನು ಐಸಿಸಿ ಟೂರ್ನಿಯಿಂದಲೇ ಹೊರ ಹಾಕಿದೆ. ಬಾಂಗ್ಲಾದೇಶ ಜಾಗಕ್ಕೆ ಸ್ಕಾಟ್‌ಲ್ಯಾಂಡ್ ಬಂದಿದೆ. ಈಗ ಪಾಕಿಸ್ತಾನ ಹೊಸ ಕ್ಯಾತೆ ತೆಗೆದಿದ್ದು, ಟೂರ್ನಿಗೆ ಬಹಿಷ್ಕಾರ ಹಾಕುವ ನಿರೀಕ್ಷೆ ಇದೆ.
ಟಿ-20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7ಕ್ಕೆ ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಕೊಲಂಬೋದಲ್ಲಿ ಪಂದ್ಯವನ್ನು ಆಡಲಿವೆ. ಸಂಪ್ರದಾಯಿಕ ಎದುರಾಳಿಗಳ ಪಂದ್ಯ ನೋಡಲು ಕಾಯುವ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ರೀತಿ ಪಾಕಿಸ್ತಾನ ವರ್ತಿಸುತ್ತಿದೆ. ಟಿ-20 ವಿಶ್ವಕಪ್ ಪಂದ್ಯಾವಳಿಗೆ ಪಾಕಿಸ್ತಾನ ತಂಡವನ್ನು ಘೋಷಣೆ ಮಾಡಿದೆ. ಆದರೆ ನಿಗದಿಯಾಗಿದ್ದ ತಂಡದ ಕಿಟ್ ಲಾಂಚ್ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಟಿ-20 ವಿಶ್ವಕಪ್ ವಿಚಾರದಲ್ಲಿ ಬಾಂಗ್ಲಾದೇಶವನ್ನು ಪಾಕಿಸ್ತಾನ ಬೆಂಬಲಿಸಿಕೊಂಡು ಬಂದಿತ್ತು. ಐಸಿಸಿ ಬಾಂಗ್ಲಾದೇಶವನ್ನು ಟೂರ್ನಿಯಿಂದಲೇ ಹೊರ ಹಾಕಿದೆ. ಇದು ಅನ್ಯಾಯ ಎಂದು ಪಾಕಿಸ್ತಾನ ಬಹಿರಂಗವಾಗಿ ಹೇಳಿತ್ತು. ಈಗ ಬಾಂಗ್ಲಾದೇಶಕ್ಕೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಪಾಕಿಸ್ತಾನ ಟೂರ್ನಿಗೆ ಬಹಿಷ್ಕಾರ ಹಾಕುವ ನಿರೀಕ್ಷೆ ಇದೆ. ಅದಕ್ಕಾಗಿಯೇ ಕಿಟ್ ಲಾಂಚ್ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.
ಐಸಿಸಿ ಟಿ-20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ತಂಡದ ಪಾಲ್ಗೊಳ್ಳುವಿಕೆಯ ಕುರಿತು ಅನಿಶ್ಚಿತತೆ ಮುಂದುವರೆದಿದೆ. ಕಿಟ್ ಲಾಂಚ್ ಕಾರ್ಯಕ್ರಮ ರದ್ದುಪಡಿಸಿದ್ದು ಮತ್ತು ಭದ್ರತಾ ಕಾಳಜಿಗಳ ಬಗ್ಗೆ ಪಿಸಿಬಿಯ ನಿಲುವುಗಳು ಟೂರ್ನಿ ಬಹಿಷ್ಕಾರದ ವದಂತಿಗಳನ್ನು ಇನ್ನಷ್ಟು ಹೆಚ್ಚಿಸಿವೆ.
ಶನಿವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅನಿವಾರ್ಯ ಸಂದರ್ಭ ಎಂದು ಉಲ್ಲೇಖಿಸಿ ರದ್ದುಗೊಳಿಸಿದೆ. ತಂಡದ ವಿಶ್ವಕಪ್ ಕಿಟ್ ಲಾಂಚ್ ಮತ್ತು ಜೆರ್ಸಿ ಅನಾವರಣ ಇಂದು ನಡೆಯಬೇಕಿತ್ತು. ಮಾಹಿತಿಗಳ ಪ್ರಕಾರ ಈ ಕಿಟ್ ಲಾಂಚ್, ಜೆರ್ಸಿ ಅನಾವರಣ ಕಾರ್ಯಕ್ರಮ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದ ಟಾಸ್ ಪ್ರಕ್ರಿಯೆಯ ಬಳಿಕ ನಡೆಯಬೇಕಿತ್ತು. ಆದರೆ ಕಿಟ್ ಲಾಂಚ್ ಕಾರ್ಯಕ್ರಮಕ್ಕೆ ವಿದೇಶಾಂಗ ಇಲಾಖೆಯಿಂದ ಅಧಿಕೃತ ಅನುಮತಿ ಸಿಗದ ಕಾರಣಕ್ಕೆ ಅದನ್ನು ರದ್ದುಗೊಳಿಸಲಾಗಿದೆ.
ವಿದೇಶಾಂಗ ಇಲಾಖೆಯು ಸೋಮವಾರದಂದು ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಕುರಿತು ಅಂತಿಮ ತೀರ್ಮಾನವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಅಲ್ಲಿಯವರೆಗೆ, ವಿಶ್ವಕಪ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸುವ ಯಾವುದೇ ಕಾರ್ಯಕ್ರಮ ಮಾಡದಿರಲು ಪಿಸಿಬಿ ತೀರ್ಮಾನಿಸಿದೆ.
ರಾಜಕೀಯ, ಕ್ರೀಡೆ, ರಾಜತಾಂತ್ರಿಕ ಸಂಬಂಧ ವಿಚಾರದಲ್ಲಿ ಪಾಕಿಸ್ತಾನ ಸಿಲುಕಿಕೊಂಡಿದೆ. ಆದ್ದರಿಂದ ಪಾಕಿಸ್ತಾನ ತಂಡದ ಕ್ರಿಕೆಟ್ ಭವಿಷ್ಯವು ಪಿಸಿಬಿ ನಿಯಂತ್ರಣವನ್ನು ಮೀರಿ ಹೋಗಿದೆ. ಅದು ಈಗ ರಾಜತಾಂತ್ರಿಕ ವಿಚಾರಕ್ಕೆ ಬೆಸೆದುಕೊಂಡಿದೆ. ಆಟಗಾರರಿಗೆ ಮತ್ತು ತಂಡದ ಆಡಳಿತ ಮಂಡಳಿಗೆ ಈ ವಿಚಾರ ಈಗಾಗಲೇ ಒತ್ತಡವನ್ನು ತಂದಿದೆ. ಅಂತರಾಷ್ಟ್ರೀಯ ವೇಳಾಪಟ್ಟಿಯೂ ಪ್ರಕಟವಾಗಿದ್ದು, ಬೇಗ ತೀರ್ಮಾನ ಕೈಗೊಳ್ಳಬೇಕಾದ ಒತ್ತಡವೂ ಎದುರಾಗಿದೆ.
ತಂಡವು ತಾವು ಪಂದ್ಯಾವಳಿಯಲ್ಲಿ ಭಾಗವಹಿಸುವುದು ಖಚಿತ ಎಂಬಂತೆಯೇ ಸಿದ್ಧತೆಗಳನ್ನು ಮುಂದುವರಿಸುತ್ತಿದೆ. ಆದರೆ ಸರ್ಕಾರದ ಕಡೆಯಿಂದ ಅಧಿಕೃತ ಹಸಿರು ನಿಶಾನೆ ಸಿಗದಿರುವುದು ಹಲವು ಅನುಮಾನಗಳಿಗೆ ಮತ್ತು ಆತಂಕಗಳಿಗೆ ಕಾರಣವಾಗಿದೆ.
ತಂಡದ ಪ್ರವಾಸ ಪಟ್ಟಿ ಅಂತಿಮ: ಆದರೆ ಪಿಟಿಐ ವರದಿಯ ಪ್ರಕಾರ ಪಾಕಿಸ್ತಾನ ತಂಡದ ಪ್ರವಾಸದ ಯೋಜನೆ ಅಂತಿಮಗೊಂಡಿದೆ. ಪಿಸಿಬಿ ಈಗಾಗಲೇ ತನ್ನ ಟಿ20 ವಿಶ್ವಕಪ್ ತಂಡವು ಫೆಬ್ರವರಿ 2ರಂದು ಮುಂಜಾನೆ ಕೊಲಂಬೊಗೆ ಪ್ರಯಾಣಿಸಲಿದೆ ಎಂದು ಹೇಳಿದೆ.
ಟೂರ್ನಿಯನ್ನು ಬಹಿಷ್ಕರಿಸುವ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಫೆಬ್ರವರಿ 15ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಭಾರತದಲ್ಲಿ ಆಡುವ ಬಗ್ಗೆ ಭದ್ರತಾ ಕಳವಳ ವ್ಯಕ್ತಪಡಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಪಿಸಿಬಿ ತನ್ನ ಸಂಪೂರ್ಣ ಬೆಂಬಲವನ್ನು ನೀಡಿದೆ. ಆ ನಿಲುವಿನಲ್ಲಿ ಈಗಲೂ ಬದಲಾವಣೆ ಇಲ್ಲ ಎಂದು ಪಿಸಿಬಿ ಹೇಳಿದೆ.

