ರಾಯಚೂರು: ಕುಡಿಯಲು ನೀರು ತರಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಧಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ.
ಇಲ್ಲಿನ ಸಿಂಧನೂರು ತಾಲೂಕಿನ ಕುರಕಂದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ಶಾಲೆಯಲ್ಲಿ ವಿರಾಮದ ಸಂದರ್ಭದಲ್ಲಿ ಕುಡಿಯಲು ನೀರು ತರಲೆಂದು ವಿದ್ಯಾರ್ಥಿನಿ ತೆರಳಿದ್ದಳು. ಈ ವೇಳೆ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.
5 ತರಗತಿಯ ವಿದ್ಯಾರ್ಥಿನಿ ತನುಶ್ರೀ ಮೃತ ಬಾಲಕಿ. ಮಗಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ತುರವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

