ಬಾಗಲಕೋಟೆ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಅಖಾಡ ರಂಗೇರಿದ್ದು, ಅಭ್ಯರ್ಥಿಗಳು ಮತದಾರರನ್ನು ಓಲೈಸಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಈ ನಡುವೆ ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ NSUI ಘಟಕದಿಂದ ಕರಪತ್ರ ಹಂಚಿಕೆ ಆರೋಪ ಕೇಳಿಬಂದಿತ್ತು. ಇದೀಗ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ NSUI ಸಂಘಟನೆ ಅಪಪ್ರಚಾರ ಮಾಡಿದ ಆರೋಪ ಕೇಳಿಬಂದಿದ್ದು, ಕುಮಾರೇಶ್ವರ ಕ್ಯಾಂಪಸ್ನಲ್ಲಿ ಕರಪತ್ರ ಹಿಡಿದು ಬಂದಿದ್ದ 18 NSUI ಕಾರ್ಯಕರ್ತರು ಹಾಗೂ ಬಿಜೆಪಿಯ ಕಾರ್ಯಕರ್ತರ ನಡುವೆ ಗಲಾಟೆಯಾಗಿತ್ತು. ಬಳಿಕ ಐವರು NSUI ಕಾರ್ಯಕರ್ತರನ್ನು ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಲಾಗಿದೆ.
ಬಾಗಲಕೋಟೆ ನವನಗರದ ಸಿಪಿಐ ಕಚೇರಿಯಲ್ಲಿ ಗದ್ದಲ ಉಂಟಾಗಿತ್ತು. ಠಾಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಜಮಾವಣೆಗೊಂಡು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.
ಇದೀಗ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆ ಸಿಪಿಐ ವಿಜಯ ಮುರಗುಂಡಿ ಮತ್ತು ನವನಗರ ಪೊಲೀಸ್ ಠಾಣೆ ಪಿಎಸ್ಐ ಅಶೋಕ ಚೌಹಾಣ್ರನ್ನು ವರ್ಗಾವಣೆ ಮಾಡಿ ಡಿಜಿ & ಐಜಿಪಿ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಉತ್ತರ ವಲಯ ಐಜಿಪಿ ಕಚೇರಿಗೆ ಪಿಎಸ್ ಐ ಅಶೋಕ್ರನ್ನ ವರ್ಗಾವಣೆ ಮಾಡಲಾಗಿದ್ದು, ವಿಜಯಪುರ ಮಹಿಳಾ ಠಾಣೆಗೆ ಸಿಪಿಐ ವಿಜಯ ಮುರಗುಂಡಿ ಅವರನ್ನ ವರ್ಗಾವಣೆ ಮಾಡಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿಸಿ ಕಚೇರಿಗೆ ವಿಪಕ್ಷ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ನಾಯಕರು ಡಿಸಿ ಭೇಟಿ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮಕೈಗೊಳ್ಳಿ ಹಾಗೂ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವಂತೆ ಮನವಿ ಪತ್ರ ನೀಡಿದ್ದಾರೆ.

