ಬಟರ್ ಚಿಕನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಹೆಚ್ಚಾಗಿ ಉತ್ತರ ಭಾರತೀಯ ಶೈಲಿಯ ಊಟದಲ್ಲಿ ಕಾಣಸಿಗುವ ಈ ಖಾದ್ಯವನ್ನು ಈಗ ಹೊಸ ರೂಪದಲ್ಲಿ ಸವಿಯಬಹುದು. ಬಟರ್ ಚಿಕನ್ ಮತ್ತು ಪರೋಟದ ರುಚಿಯನ್ನು ಒಂದೇ ಕಡೆ ಸವಿಯಲು ಈ ಕಾಠಿ ರೋಲ್ ಅತ್ಯುತ್ತಮ ಆಯ್ಕೆಯಾಗಿದೆ. ಕಚೇರಿಯಿಂದ ಬಂದ ಮೇಲೆ ಅಥವಾ ಸಂಜೆಯ ಹಸಿವಿಗೆ ತ್ವರಿತವಾಗಿ ಏನಾದರೂ ವಿಶೇಷವಾಗಿ ಸವಿಯಬೇಕು ಎಂದೆನಿಸಿದರೆ ಈ ರೆಸಿಪಿ ಖಂಡಿತ ನಿಮಗಾಗಿ.
ಬಟರ್ ಚಿಕನ್ ಕಾಠಿ ರೋಲ್ ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನದ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: ಈ ಖಾದ್ಯ ತಯಾರಿಸಲು ಎರಡು ಬೋನ್‌ಲೆಸ್ ಚಿಕನ್ ಬ್ರೆಸ್ಟ್ ತುಂಡುಗಳು, ಎರಡು ಚಮಚ ಬೆಣ್ಣೆ, ಒಂದು ಚಮಚ ಎಣ್ಣೆ, ಒಂದು ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಎರಡು ಎಸಳು ಬೆಳ್ಳುಳ್ಳಿ ಮತ್ತು ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅಗತ್ಯವಿದೆ. ಮಸಾಲೆಯಾಗಿ ತಲಾ ಒಂದು ಚಮಚದಷ್ಟು ಗರಂ ಮಸಾಲಾ, ಅರಿಶಿನ ಪುಡಿ, ಅಚ್ಚಖಾರದ ಪುಡಿ, ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೇಕಾಗುತ್ತದೆ. ಇದರ ಜೊತೆಗೆ ಅರ್ಧ ಕಪ್ ಮೊಸರು ಹಾಗೂ 4 ರಿಂದ 6 ಪರೋಟಗಳನ್ನು ಸಿದ್ಧಪಡಿಸಿಕೊಳ್ಳಿ. ಮೇಲೋಗರಕ್ಕಾಗಿ ಈರುಳ್ಳಿ, ಟೊಮೆಟೊ ಚೂರುಗಳು ಮತ್ತು ಕೊತ್ತಂಬರಿ ಸೊಪ್ಪು ಇರಲಿ.
ತಯಾರಿಸುವ ವಿಧಾನ: ಮೊದಲು ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೆಳ್ಳುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ಒಂದು ಸಣ್ಣ ಬಟ್ಟಲಿನಲ್ಲಿ ಸಿದ್ಧಪಡಿಸಿಕೊಂಡ ಎಲ್ಲಾ ಮಸಾಲೆ ಪುಡಿಗಳನ್ನು ಮಿಕ್ಸ್ ಮಾಡಿ ಪ್ಯಾನ್‌ಗೆ ಸೇರಿಸಿ ಚೆನ್ನಾಗಿ ಕೈಯಾಡಿಸಿ.
ಈಗ ಚಿಕನ್ ತುಂಡುಗಳನ್ನು ಹಾಕಿ ಮಸಾಲೆಯೊಂದಿಗೆ ಬೆರೆಯಲು ಬಿಡಿ. ಚಿಕನ್ ಬೆಂದ ನಂತರ ಉರಿಯನ್ನು ಕಡಿಮೆ ಮಾಡಿ ಅದಕ್ಕೆ ಮೊಸರನ್ನು ಸೇರಿಸಿ. ಚಿಕನ್ ಮಸಾಲೆಯೊಂದಿಗೆ ಹೊಂದಿಕೊಂಡು ಮೆತ್ತಗಾಗಲು ಸುಮಾರು 5 ರಿಂದ 7 ನಿಮಿಷ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.
ಮತ್ತೊಂದೆಡೆ ತವಾ ಮೇಲೆ ಪರೋಟಗಳನ್ನು ಬಿಸಿ ಮಾಡಿಕೊಳ್ಳಿ. ಪರೋಟದ ಮಧ್ಯಭಾಗಕ್ಕೆ ತಯಾರಿಸಿಕೊಂಡ ಬಟರ್ ಚಿಕನ್ ಮಿಶ್ರಣವನ್ನು ಹರಡಿ. ಅದರ ಮೇಲೆ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚನ್ನಾಗಿ ರೋಲ್ ಮಾಡಿ. ಈಗ ಬಿಸಿಬಿಸಿಯಾದ ಬಟರ್ ಚಿಕನ್ ಕಾಠಿ ರೋಲ್ ಸವಿಯಲು ಸಿದ್ಧ.

