ಬೆಂಗಳೂರು: ಪೊಲೀಸ್ ಸಮವಸ್ತ್ರದಲ್ಲಿ ಬಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯವರನ್ನು ಬೆದರಿಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಈ ಪ್ರಕರಣವನ್ನು ಬ್ಯಾಡರಹಳ್ಳಿ ಪೊಲೀಸರು ಬೇಧಿಸಿದ್ದಾರೆ, ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಕೈದಿಯ ಕೈವಾಡದಿಂದ ಉದ್ಯಮಿ ಮನೆಯಲ್ಲಿ ಕಳ್ಳತನ ನಡೆದಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್ನಲ್ಲಿರುವ ಹೊಂಬಾಳೆಗೌಡ ಎಂಬುವವರ ಮನೆಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದಿದ್ದ ಗ್ಯಾಂಗ್ ವೊಂದು ನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದರು. ಮನೆಯಲ್ಲಿದ್ದ 20 ಲಕ್ಷ ರೂಪಾಯಿ ನಗದು ಹಾಗೂ ಅರ್ಧ ಕೆಜಿ ಚಿನ್ನವನ್ನು ದೋಚಿ ಪರಾರಿಯಾಗಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸೋಕೋ ಟೀಂ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದಾಗ ಮಹತ್ವದ ಸುಳಿವು ಲಭ್ಯವಾಗಿತ್ತು. ಅಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ಪರೀಕ್ಷೆ ಮಾಡಿದಾಗ, ಅದು ಈಗಾಗಲೇ ಜೈಲಿನಲ್ಲಿರುವ ಒಬ್ಬ ಖೈದಿಯ ಬೆರಳಚ್ಚಿಗೆ ತಾಳೆಯಾಗಿದೆ. ಇದು ಪೊಲೀಸರನ್ನು ಬೆಚ್ಚಿಬೀಳಿಸಿತ್ತು.
ಜೈಲಿನಲ್ಲಿರುವ ವ್ಯಕ್ತಿ ದರೋಡೆ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡಿತ್ತು. ನಂತರದಲ್ಲಿ ಈ ಬಗ್ಗೆ ತನಿಖೆ ಮಾಡಿದಾಗ ಖೈದಿಯು ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿರುವುದು ಗೊತ್ತಾಗಿದೆ. ದರೋಡೆ ನಡೆದ ಮರುದಿನವೇ ಆತ ಪುನಃ ಜೈಲಿಗೆ ವಾಪಸ್ ಹೋಗಿರುವುದು ತಿಳಿದುಬಂದಿದೆ.
ಜೈಲಿನಿಂದ ಹೊರಬಂದು ದರೋಡೆ ಸ್ಕೆಚ್ ಹಾಕಿ, ಕಳ್ಳತನ ಮಾಡಿ ಯಾರಿಗೂ ಅನುಮಾನ ಬಾರದಂತೆ ಮತ್ತೆ ಜೈಲು ಸೇರಿಕೊಂಡಿದ್ದ. ಹೊಂಬಾಳೆಗೌಡ ಅವರು ಇತ್ತೀಚೆಗಷ್ಟೇ ಜಮೀನು ಮಾರಾಟ ಮಾಡಿದ್ದು, ಮನೆಯಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ನಗದು ಇತ್ತು ಎನ್ನಲಾಗಿದೆ. ಈ ವಿಚಾರ ದರೋಡೆಕೋರರಿಗೆ ಗೊತ್ತಾಗಿದೆ. ಮನೆಯಲ್ಲಿ ದೊಡ್ಡ ಮೊತ್ತದ ಹಣ ಇರುವ ಬಗ್ಗೆ ಕುಟುಂಬದವರಿಗೇ ತಿಳಿದಿದ್ದರಿಂದ, ಕುಟುಂಬದ ಸದಸ್ಯರ ಮೇಲೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಸದ್ಯ ಬ್ಯಾಡರಹಳ್ಳಿ ಪೊಲೀಸರು ಜೈಲಿನಲ್ಲಿರುವ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.

