ಕೆಲ ಖಾಸಗಿ ಬಸ್ ಆಪರೇಟರ್‌ಗಳ ಬೇಜವಾಬ್ದಾರಿತನ ಹಾಗೂ ಅಸಮರ್ಪಕ ಸೇವೆಯಿಂದ ಪ್ರಯಾಣಿಕರು ಪರದಾಡುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಸಮಯಪ್ರಜ್ಞೆ ಮತ್ತು ಬಸ್ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಗ್ರಾಹಕರ ಆಯೋಗ ಮಹತ್ವದ ಆದೇಶ ನೀಡಿದೆ. ಮಾರ್ಗ ಬದಲಾಯಿಸಿ ತೀವ್ರ ವಿಳಂಬ ಮಾಡಿ, ವಿದ್ಯಾರ್ಥಿ ವಿಮಾನ ತಪ್ಪಿಸಿಕೊಳ್ಳಲು ಕಾರಣವಾದ ಖಾಸಗಿ ಬಸ್ ಸಂಸ್ಥೆಗೆ ಆಂಧ್ರಪ್ರದೇಶದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 73,000 ರೂ. ದಂಡ ಹಾಗೂ ಪರಿಹಾರ ಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ: ಆಂಧ್ರಪ್ರದೇಶದ ಆದೋನಿಯ ವಿದ್ಯಾರ್ಥಿಯೊಬ್ಬ ದೆಹಲಿಯಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆದಿದ್ದ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10:50ಕ್ಕೆ ಆತನಿಗೆ ದೆಹಲಿ ವಿಮಾನವಿತ್ತು. ವಿಮಾನ ನಿಲ್ದಾಣವನ್ನು ಸಮಯಕ್ಕೆ ಸರಿಯಾಗಿ ತಲುಪುವ ಉದ್ದೇಶದಿಂದ ಆತ ಹಿಂದಿನ ರಾತ್ರಿ 11:15ಕ್ಕೆ ಆದೋನಿಯಿಂದ ಹೊರಟು, ಮುಂಜಾನೆ 5:00 ಗಂಟೆಗೆ ಬೆಂಗಳೂರು ತಲುಪಬೇಕಿದ್ದ ಖಾಸಗಿ ಬಸ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ್ದ.
ಆದರೆ, ಪ್ರಯಾಣದ ವೇಳೆ ಬಸ್ ಸಿಬ್ಬಂದಿ ಯಾವುದೇ ಮುನ್ಸೂಚನೆ ನೀಡದೆ ವಾಹನವನ್ನು ಬೇರೊಂದು ಮಾರ್ಗಕ್ಕೆ ತಿರುಗಿಸಿದ್ದಾರೆ. ಪ್ರಯಾಣಿಕರಿಗೆ ಬೆಳಗ್ಗೆ 5:30ರ ಒಳಗೆ ಏರ್‌ಪೋರ್ಟ್ ಸಮೀಪ ತಲುಪಿಸುವುದಾಗಿ ಭರವಸೆ ನೀಡಿದ್ದರೂ, ಅಂತಿಮವಾಗಿ ಬಸ್ ಬೆಳಗ್ಗೆ 11:30ಕ್ಕೆ ತಲುಪಿದೆ. ಅಂದರೆ ನಿಗದಿತ ಸಮಯಕ್ಕಿಂತ ಬರೋಬ್ಬರಿ 6 ಗಂಟೆ ತಡವಾಗಿ ಬಂದ ಕಾರಣ, ವಿದ್ಯಾರ್ಥಿಗೆ 10:50ರ ದೆಹಲಿ ವಿಮಾನ ತಪ್ಪಿಹೋಗಿದೆ.
ವಿದ್ಯಾರ್ಥಿಯ ಸಂಕಷ್ಟ: ವಿಮಾನ ಕೈತಪ್ಪಿದ ಕಾರಣ ಅನಿವಾರ್ಯವಾಗಿ ವಿದ್ಯಾರ್ಥಿ ಅಂದೇ ಸಂಜೆಯ ವಿಮಾನಕ್ಕೆ 8,000 ರೂ. ತೆತ್ತು ತತ್ಕಾಲ್ ಟಿಕೆಟ್ ಪಡೆಯಬೇಕಾಯಿತು. ಜತೆಗೆ ಬೆಂಗಳೂರಿನಲ್ಲಿ ಕಾಯಲು ಕೊಠಡಿ ಬಾಡಿಗೆ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಿ ಆರ್ಥಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸಿದ. ಇದರಿಂದ ನೊಂದ ವಿದ್ಯಾರ್ಥಿ ಸೂಕ್ತ ದಾಖಲೆಗಳೊಂದಿಗೆ ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದ.
ಆಯೋಗದ ಪರಿಹಾರ ಮೊತ್ತದ ವಿವರ: ಮಾನಸಿಕ ಯಾತನೆ ಹಾಗೂ ಕಿರುಕುಳಕ್ಕೆ 50,000 ರೂ., ಹೆಚ್ಚುವರಿ ಟಿಕೆಟ್ ಮತ್ತು ಉಳಿದುಕೊಳ್ಳುವ ವೆಚ್ಚ 13,000 ರೂ., ಕೋರ್ಟ್ ಖರ್ಚು-ವೆಚ್ಚ 10,000 ರೂ. ಸೇರಿದಂತೆ ಒಟ್ಟು 73,000 ರೂ. ಪಾವತಿಸಲು ಆದೇಶಿಸಿದೆ.
ಬಸ್ ಸಂಸ್ಥೆಯ ವಾದವೇನಿತ್ತು? ವಿಚಾರಣೆ ವೇಳೆ ಬಸ್ ಆಪರೇಟರ್ ತಮ್ಮ ಟಿಕೆಟ್‌ನಲ್ಲಿರುವ “ನಿಯಮ ಮತ್ತು ಷರತ್ತುಗಳನ್ನು” ಮುಂದಿಟ್ಟು ಸಮರ್ಥಿಸಿಕೊಳ್ಳಲು ಯತ್ನಿಸಿತು. “ಸಂಚಾರ ದಟ್ಟಣೆ, ಕಾರ್ಯಾಚರಣೆ ಹಾಗೂ ಸುರಕ್ಷತೆಯ ಕಾರಣಗಳಿಂದ ಮಾರ್ಗ ಮತ್ತು ಸಮಯ ಬದಲಾಯಿಸುವ ಹಕ್ಕು ನಮಗಿದೆ. ಚಾಲಕರು ನೀಡುವ ಮೌಖಿಕ ಭರವಸೆಗಳು ಸಂಸ್ಥೆಯನ್ನು ಬಾಧ್ಯಸ್ಥರನ್ನಾಗಿ ಮಾಡುವುದಿಲ್ಲ” ಎಂದು ವಾದಿಸಿತ್ತು.
ಗ್ರಾಹಕ ಆಯೋಗದ ಕಟು ಮಾತು: ಆಯೋಗದ ಅಧ್ಯಕ್ಷ ಕರಣಂ ಕಿಶೋರ್ ಕುಮಾರ್, ಸದಸ್ಯರಾದ ಎನ್. ನಾರಾಯಣ ರೆಡ್ಡಿ ಮತ್ತು ಎಸ್. ನಜೀಮಾ ಕೌಸರ್ ಅವರಿದ್ದ ಪೀಠ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿತು.
“ಟಿಕೆಟ್ ಮೇಲಿರುವ ಸಾಮಾನ್ಯ ನಿಯಮಗಳು ಖಾಸಗಿ ಸಂಸ್ಥೆಗಳಿಗೆ ಯಾವುದೇ ಕಾರಣವಿಲ್ಲದೆ ಅಥವಾ ಪ್ರಯಾಣಿಕರಿಗೆ ತಿಳಿಸದೆ ಮನಬಂದಂತೆ ಮಾರ್ಗ ಬದಲಾಯಿಸಲು ಮುಕ್ತ ಪರವಾನಗಿ ನೀಡುವುದಿಲ್ಲ. ರಸ್ತೆ ಸಂಚಾರದಲ್ಲಿ ಸಣ್ಣಪುಟ್ಟ ವಿಳಂಬ ಸಹಜ, ಆದರೆ ಮುನ್ಸೂಚನೆಯಿಲ್ಲದೆ ಗಂಟೆಗಟ್ಟಲೆ ವಿಳಂಬ ಮಾಡಿ ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಧಕ್ಕೆ ತರುವುದು ಸ್ಪಷ್ಟ ಸೇವಾ ನ್ಯೂನತೆ” ಎಂದು ಆಯೋಗ ತರಾಟೆಗೆ ತೆಗೆದುಕೊಂಡಿತು. ಮಾರ್ಗ ಬದಲಾವಣೆಗೆ ರಸ್ತೆ ದುರಸ್ತಿ, ಅಪಘಾತ ಅಥವಾ ಅಧಿಕೃತ ತಡೆ ಇದ್ದ ಬಗ್ಗೆ ಯಾವುದೇ ಪುರಾವೆಗಳನ್ನು ನೀಡಲು ಸಂಸ್ಥೆ ವಿಫಲವಾಗಿದೆ ಎಂದು ಪೀಠ ಬೆಟ್ಟುಮಾಡಿದೆ.
ವಿದ್ಯಾರ್ಥಿ ಬಸ್ ಆಗಮನದ ಸಮಯ (ಬೆಳಗ್ಗೆ 5:00) ಮತ್ತು ವಿಮಾನದ ಸಮಯ (ಬೆಳಗ್ಗೆ 10:50) ನಡುವೆ ಬರೋಬ್ಬರಿ 5 ಗಂಟೆ 50 ನಿಮಿಷಗಳ ಸಾಕಷ್ಟು ಸುರಕ್ಷಿತ ಅಂತರವನ್ನು ಇಟ್ಟುಕೊಂಡಿದ್ದ. ಹೀಗಾಗಿ ಆತನ ಕಡೆಯಿಂದ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟ ಆಯೋಗ, ಸಂಸ್ಥೆಯು 73,000 ರೂ. ಪರಿಹಾರ ನೀಡುವಂತೆ ಆದೇಶಿಸಿತು.

