ಸೋಮವಾರ ದಕ್ಷಿಣ ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವು ಕಟ್ಟಡಗಳು ಕುಸಿದು ಬಿದ್ದು ಅವಶೇಷಗಳಾಗಿವೆ. ಈ ಭೂಕಂಪದಿಂದಾಗಿ ಈ ಪ್ರದೇಶದಾದ್ಯಂತ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಮಿಂಡಾನಾವೊ ಭಾಗದಲ್ಲಿ ಭೂಕಂಪನದ ತೀವ್ರತೆಗೆ ಕಟ್ಟಡಗಳು ಕುಸಿಯುತ್ತಿರುವ ದೃಶ್ಯಗಳು ಕಂಡುಬಂದಿವೆ. ಶಾಲಾ ಆವರಣದ ಹೊರಗೆ ಚಿತ್ರೀಕರಿಸಲಾದ ಒಂದು ವಿಡಿಯೋದಲ್ಲಿ, ಭೂಕಂಪನದ ನಡುವೆ ಸಮೀಪದ ಕಟ್ಟಡವೊಂದು ಕುಸಿಯುತ್ತಿರುವುದನ್ನು ಕಂಡು ವಿದ್ಯಾರ್ಥಿಗಳು ಮೈದಾನದಲ್ಲಿ ಜಮಾಯಿಸಿರುವುದು ಕಂಡುಬಂದಿದೆ.
ಜನರಲ್ ಸ್ಯಾಂಟೋಸ್ ನಗರದಲ್ಲಿ ಭೂಕಂಪನದ ನಂತರ ಕಟ್ಟಡದ ಒಂದು ಭಾಗ ಕುಸಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗಳಿಂದ ರೋಗಿಗಳನ್ನು ಸ್ಥಳಾಂತರಿಸಲಾಗಿದೆ, ಮತ್ತು ಕೆಲವು ಕಡೆಗಳಲ್ಲಿ ಶಾಲೆಯ ಮೊದಲ ದಿನವಾಗಿದ್ದರಿಂದ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ.
ಫಿಲಿಪೈನ್ಸ್ ಇನ್ಸ್ಟಿಟ್ಯೂಟ್ ಆಫ್ ವೊಲ್ಕಾನಾಲಜಿ ಅಂಡ್ ಸಿಸ್ಮಾಲಜಿ ವರದಿಯ ಪ್ರಕಾರ, ಸೋಮವಾರ ಮಿಂಡಾನಾವೊ ದ್ವೀಪದ ಜನರಲ್ ಸ್ಯಾಂಟೋಸ್ ನಗರದಿಂದ ನೈಋತ್ಯಕ್ಕೆ 13 ಕಿಮೀ (8 ಮೈಲು) ದೂರದಲ್ಲಿ ಮತ್ತು 10 ಕಿಮೀ (6.2 ಮೈಲು) ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಇತ್ತು. ಜರ್ಮನಿಯ ಜಿಎಫ್‌ಜೆಡ್ ಜಿಯೋಸೈನ್ಸ್ ಸೆಂಟರ್ ಆರಂಭದಲ್ಲಿ ಭೂಕಂಪದ ತೀವ್ರತೆಯನ್ನು 8.2 ಎಂದು ಅಂದಾಜಿಸಿತ್ತು, ನಂತರ ಅದನ್ನು 7.8 ಕ್ಕೆ ಪರಿಷ್ಕರಿಸಿತು.
ಭೂಕಂಪದ ನಂತರ ಫಿಲಿಪೈನ್ಸ್ ಮತ್ತು ನೆರೆಯ ಇಂಡೋನೇಷ್ಯಾದಲ್ಲಿ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ. ಫಿಲಿಪೈನ್ಸ್‌ನ ಕೆಲವು ಕರಾವಳಿ ಪ್ರದೇಶಗಳಲ್ಲಿ ಮೂರು ಮೀಟರ್‌ವರೆಗೆ ಎತ್ತರದ ಅಲೆಗಳು ಅಪ್ಪಳಿಸಬಹುದು ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಎಚ್ಚರಿಸಿದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದ ಭಾಗಗಳಲ್ಲಿ ಸಣ್ಣ ಅಲೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಎಎಫ್‌ಪಿ ವರದಿಯ ಪ್ರಕಾರ, ಈ ಭೂಕಂಪದಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಹಾನಿಗೊಳಗಾದ ಕಟ್ಟಡಗಳು, ಕುಸಿದ ಮನೆಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳ ಕುರಿತು ವರದಿಗಳು ಬಂದ ನಂತರ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಜನರಲ್ ಸ್ಯಾಂಟೋಸ್ ಸಿಟಿ ಪೊಲೀಸ್ ಮಾಸ್ಟರ್ ಸಾರ್ಜೆಂಟ್ ರಾಬರ್ಟ್ ಡಾಗನ್ ಮಾತನಾಡಿ, “ಅನೇಕ ಕಟ್ಟಡಗಳ ಮೇಲೆ ಪರಿಣಾಮ ಬೀರಿದೆ, ಆದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಬ್ಯುಸಿಯಾಗಿರುವುದರಿಂದ ನಿಖರವಾದ ಸಂಖ್ಯೆಯನ್ನು ಹೇಳಲು ಸಾಧ್ಯವಿಲ್ಲ. ಹಲವು ಕಟ್ಟಡಗಳು ಮತ್ತು ಮನೆಗಳು ಕುಸಿದಿವೆ” ಎಂದು ತಿಳಿಸಿದ್ದಾರೆ.

