ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದೆ. 2026-27ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮಂಡನೆ ಮಾಡುತ್ತಿದ್ದಾರೆ.
ಈ ಬಾರಿ ಭಾನುವಾರ ಸಂಸತ್ ಕಲಾಪ ನಡೆಸಿ, 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುವುದು ವಿಶೇಷವಾಗಿದೆ. ಹಲವು ವರ್ಷಗಳಿಂದ ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುತ್ತಿದೆ. ಈ ಬಾರಿ ಭಾನುವಾರ ಆದರೂ ಸಹ ಆ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ.
5 ರಾಜ್ಯಗಳ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ ಕೇಂದ್ರಯ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ.
ರೈತರ ನಿರೀಕ್ಷೆಗಳು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ (ರಿ) ಫೆಬ್ರವರಿ 1ರಂದು ಮಂಡನೆ ಮಾಡುವ ಕೇಂದ್ರ ಬಜೆಟ್ ನಿರೀಕ್ಷೆಗಳು ಏನು? ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಈ ಕುರಿತು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ.
* ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಖರೀದಿ ಕಾಯ್ದೆ ಜಾರಿಗೆ ಬರಬೇಕು.
* ಕೃಷಿ ಸಾಲ ಬಡ್ಡಿ ರಹಿತ 5 ಲಕ್ಷ ಯೋಜನೆ ಜಾರಿಗೆ ತರಬೇಕು.
* ಕಿಸಾನ್ ಸಮ್ಮಾನ್ ಯೋಜನೆ 10,000ಕ್ಕೆ ಏರಿಸಬೇಕು.
* ಕಬ್ಬಿನ ಎಫ್.ಆರ್.ಪಿ. ದರ ರೈತರ ಹೊಲದಲ್ಲಿನ ದರ ಎಂದು ನಿಗದಿಯಾಗಬೇಕು.
* ಅತಿವೃಷ್ಟಿ ಮಳೆ ಹಾನಿ ಪರಿಹಾರ. ಎನ್.ಡಿ.ಆರ್.ಎಫ್. ಮಾನದಂಡ ವೈಜ್ಞಾನಿಕವಾಗಿ ಬದಲಾಗಬೇಕು.
* ಕೃಷಿ ಸಾಲ ನೀತಿ ಬದಲಾಗಬೇಕು ಕೃಷಿ ಭೂಮಿ ಮೌಲ್ಯಕ್ಕೆ 75ರಷ್ಟು ಸಾಲ ನೀಡುವ ಯೋಜನೆ ಜಾರಿಗೆ ಬರಬೇಕು
* ರೈತರ ಕೃಷಿ ಸಾಲ ವಸುಲಾತಿಗಾಗಿ ಜಮೀನು ಮುಟ್ಟುಗೋಲು ಹಾಕಿ ಹರಾಜು ಹಾಕುವ ಸರ್ಪೈಸಿ ಕಾಯ್ದೆ ರದ್ದು ಮಾಡಬೇಕು
ಈ ಮೇಲ್ಕಂಡ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಾರಿಗೆ ತರಬೇಕು ಎಂದು ರಾಜ್ಯದ ರೈತರ ಪರವಾಗಿ ಒತ್ತಾಯಿಸುತ್ತೇವೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಬಹಳ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿವೆ. ಕೇಂದ್ರ ಸರ್ಕಾರವು ಇದಕ್ಕಾಗಿಯೇ ಅಂತರ-ಸಚಿವಾಲಯ ಸಮಿತಿಯನ್ನು ರಚಿಸಿದೆ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವುದು (DFI) ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಅದನ್ನು ಸಾಧಿಸಲು ತಂತ್ರಗಳನ್ನು ಶಿಫಾರಸು ಮಾಡಿದೆ.
ವಿವಿಧ ನೀತಿಗಳು, ಸುಧಾರಣೆಗಳು ಮತ್ತು ಕಾರ್ಯಕ್ರಮಗಳ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವ ತಂತ್ರವನ್ನು ಒಳಗೊಂಡಿರುವ 14 ಸಂಪುಟಗಳ ವರದಿಯನ್ನು ಸಮಿತಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ರೈತರ ಆದಾಯ ಬೆಳವಣಿಗೆಯ ಏಳು ಮೂಲಗಳನ್ನು ಗುರುತಿಸಲಾಗಿದೆ.
ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆ ಜಾರಿಗೆ ತಂದಿದೆ. ರೈತರಿಗೆ ಆದಾಯದ ಬೆಂಬಲ ನೀಡುವ ಯೋಜನೆ ಇದಾಗಿದ್ದು, ವರ್ಷಕ್ಕೆ 3 ಸಮಾನ ಕಂತುಗಳಲ್ಲಿ ರೂ. 6000 ನೀಡುವ ಆದಾಯ ಬೆಂಬಲ ಯೋಜನೆ ಇದು. ಈ 6 ಸಾವಿರ ರೂ.ಗಳನ್ನು 10,000 ರೂ.ಗಳಿಗೆ ಏರಿಕೆ ಮಾಡಲಾಗುತ್ತದೆ ಎಂಬ ಬಗ್ಗೆ ವರದಿಗಳಿವೆ. ಈ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.

