ಹರಿಯಾಣದ ಫರಿದಾಬಾದ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಖಾಸಗಿ ಶಾಲೆಯ 29 ವರ್ಷದ ಶಿಕ್ಷಕಿಯನ್ನು ಮಾಸ್ಕ್ ಧರಿಸಿದ್ದ ದುಷ್ಕರ್ಮಿಯೊಬ್ಬ ಶಾಲೆಯ ಆವರಣದಲ್ಲೇ ಕೇವಲ 30 ಸೆಕೆಂಡುಗಳಲ್ಲಿ 34 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಈ ಭೀಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ನಡೆದ ಎರಡು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಶಿಕ್ಷಕಿ ನೀಡಿದ್ದ ಕಿರುಕುಳ ಪ್ರಕರಣಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿಯು ಶಾಲೆಯೊಳಗೆ ಪ್ರವೇಶಿಸಿ ಲಾಬಿಯಲ್ಲಿ ಕೆಲ ಹೊತ್ತು ಕಾಯುತ್ತಾನೆ. ಬಳಿಕ ಸಂಧ್ಯಾ ಅವರನ್ನು ಕಂಡ ಕೂಡಲೇ ಹೊರಗೆ ಬರಲು ಸೂಚಿಸುತ್ತಾನೆ. ಅವರು ಹೊರಬಂದ ತಕ್ಷಣ ಕುತ್ತಿಗೆಯನ್ನು ಹಿಡಿದು ಎಳೆದುಕೊಂಡು ಹೋಗಿ ಕೇವಲ 30 ಸೆಕೆಂಡುಗಳಲ್ಲಿ 34 ಬಾರಿ ಮುಖ, ಕುತ್ತಿಗೆ ಹಾಗೂ ಎದೆ ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾನೆ.
ದಾಳಿಯ ವೇಳೆ ಸಂಧ್ಯಾ ನೆಲಕ್ಕೆ ಬಿದ್ದರೂ ಆರೋಪಿ ದಾಳಿ ಮುಂದುವರಿಸಿದ್ದಾನೆ. ಕಿರುಚಾಟ ಕೇಳಿ ಶಾಲೆಯ ಆಡಳಿತಾಧಿಕಾರಿ ಸ್ಥಳಕ್ಕೆ ಧಾವಿಸಿದಾಗ, ಅವರ ಮೇಲೆಯೂ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ನಂತರ ಮತ್ತೆ ಸಂಧ್ಯಾ ಅವರ ಬಳಿ ಹೋಗಿ ಹೊಟ್ಟೆ ಹಾಗೂ ಮುಖಕ್ಕೆ ಸುಮಾರು 20 ಬಾರಿ ಚಾಕು ಇರಿದು, ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಗಾಯಗೊಂಡ ಸಂಧ್ಯಾ ಅವರನ್ನು ತಕ್ಷಣ ಅಲ್ಫಲಾಹ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಎರಡು ಗಂಟೆಯಲ್ಲೇ ಆರೋಪಿಯ ಬಂಧನ
ಘಟನೆಯ ಬಳಿಕ ಪೊಲೀಸರು ತನಿಖೆ ನಡೆಸಿ, 21 ವರ್ಷದ ಅಮಿತ್ ಎಂಬ ಆರೋಪಿಯನ್ನು ಎರಡು ಗಂಟೆಯೊಳಗೆ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರುಕುಳ ನೀಡುತ್ತಿದ್ದ ಆರೋಪಿ
ಪ್ರಾಥಮಿಕ ತನಿಖೆ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಅಮಿತ್‌ಗೆ ಸಂಧ್ಯಾ ಪರಿಚಯವಾಗಿತ್ತು. ಆ ಬಳಿಕ ಆತ ಪದೇಪದೇ ಅವರೊಂದಿಗೆ ಮಾತನಾಡಲು ಯತ್ನಿಸುತ್ತಿದ್ದ. ಆದರೆ ಸಂಧ್ಯಾ ನಿರಾಕರಿಸಿದರೂ ಆರೋಪಿ ಅವರನ್ನು ಹಿಂಬಾಲಿಸುತ್ತಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಿರಂತರ ಕಿರುಕುಳದಿಂದ ಬೇಸತ್ತ ಸಂಧ್ಯಾ ಕೆಲ ದಿನಗಳ ಹಿಂದೆ ಅಮಿತ್ ವಿರುದ್ಧ ಲೈಂಗಿಕ ಕಿರುಕುಳ(Molestation) ಪ್ರಕರಣ ದಾಖಲಿಸಿದ್ದರು. ಆಗ ಆರೋಪಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದನು.
ಪ್ರತೀಕಾರಕ್ಕಾಗಿ ಹತ್ಯೆ
ಸಂಧ್ಯಾ ತಮ್ಮ ವಿರುದ್ಧ ದೂರು ದಾಖಲಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದಲೇ ಅಮಿತ್ ಈ ಭೀಕರ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

