ಸಿನಿಮಾ ಪ್ರಿಯರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿರುವ ‘ಬೃಂದಾವಿಹಾರಿ’ ಚಿತ್ರತಂಡದಿಂದ ಹೊಸ ಹಾಗೂ ಪ್ರಮುಖ ಅಪ್‌ಡೇಟ್ ಒಂದನ್ನು ನೀಡಲಾಗಿದೆ. ಚಿತ್ರದ ಬಹುನಿರೀಕ್ಷಿತ ‘ನಾದಸುನಾದ’ ಎಂಬ ರಸವತ್ತಾದ ಲಿರಿಕಲ್ ಹಾಡು ಸೆಪ್ಟೆಂಬರ್ 7 ರಂದು ಅಂದರೆ ನಾಳೆ ಅಧಿಕೃತವಾಗಿ ಯೂಟ್ಯೂಬ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಹಾಡಿನ ಆಗಮನಕ್ಕಾಗಿ ಸಂಗೀತ ಪ್ರಿಯರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ದಂಡಪಾಳ್ಯ ಸರಣಿ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ವಿಶಿಷ್ಟ ಗುರುತು ಮೂಡಿಸಿರುವ ಖ್ಯಾತ ನಿರ್ದೇಶಕ ಶ್ರೀನಿವಾಸ್ ರಾಜು ಅವರ ಬರಹ ಹಾಗೂ ನಿರ್ದೇಶನದಲ್ಲಿ ಈ ‘ಬೃಂದಾವಿಹಾರಿ’ ಚಿತ್ರ ಮೂಡಿಬರುತ್ತಿದೆ. ವಿರಾಟ್ ಸಾಯಿ ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿರುವ ಈ ಸಿನಿಮಾವನ್ನು ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ವಿ ಮಂಜುನಾಥ್ ಅತ್ಯಂತ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಪ್ರಶಾಂತ್ ಸಿಆರ್ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಬಿಗ್ ಬಜೆಟ್‌ನಲ್ಲಿ ಚಿತ್ರ ರೂಪುಗೊಳ್ಳುತ್ತಿದೆ.
ತಾಂತ್ರಿಕವಾಗಿ ಸಿನಿಮಾ ಅತ್ಯಂತ ಸಮೃದ್ಧವಾಗಿ ಮೂಡಿಬರಲು ದಕ್ಷಿಣ ಭಾರತದ ಖ್ಯಾತ ತಂತ್ರಜ್ಞರು ಶ್ರಮಿಸುತ್ತಿದ್ದಾರೆ. ಛಾಯಾಗ್ರಾಹಕ ವೆಂಕಟ್ ಆರ್ ಪ್ರಸಾದ್ ಕ್ಯಾಮೆರಾ ಕೈಚಳಕ ತೋರಿಸಿದ್ದರೆ, ಹಿರಿಯ ಸಂಕಲನಕಾರ ಕೆಎಂ ಪ್ರಕಾಶ್ ಅವರ ಎಡಿಟಿಂಗ್ ಈ ಚಿತ್ರಕ್ಕಿದೆ. ಭಾರತೀಯ ಚಿತ್ರರಂಗದ ಖ್ಯಾತ ಕೋರಿಯೋಗ್ರಾಫರ್ ರಾಜು ಸುಂದರಂ ಅವರು ಈ ನೂತನ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಾಹಸ ಪ್ರಿಯರಿಗಾಗಿ ದಕ್ಷಿಣ ಭಾರತದ ಹೆಸರಾಂತ ಸಾಹಸ ನಿರ್ದೇಶಕರಾದ ರಾಮ್ ಲಕ್ಷ್ಮಣ್ ಹಾಗೂ ಆರ್‌ಎಲ್ ರಾಹುಲ್ ರೋಮಾಂಚನಕಾರಿ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಿದ್ದಾರೆ.
ಚಿತ್ರಕ್ಕೆ ವಿಜಯ್ ಈಶ್ವರ್ ಚುರುಕಾದ ಸಂಭಾಷಣೆಗಳನ್ನು ಒದಗಿಸಿದ್ದರೆ, ಕ್ರಾಂತಿ ಕುಮಾರ್ ಸಹ ಬರಹಗಾರರಾಗಿ ಹಾಗೂ ಗೌತಮ್ ನಾಯರ್ ಹೆಚ್ಚುವರಿ ಸಂಭಾಷಣೆಗಳನ್ನು ಬರೆದಿದ್ದಾರೆ. ರವಿ ಸಂತೆಹಕ್ಲು ಕಲಾ ನಿರ್ದೇಶನ ವಹಿಸಿಕೊಂಡಿದ್ದಾರೆ. ಪವನ್ ಕುಮಾರ್ ಅರಗೊಂಡ, ಸುರೇಶ್ ಕಾಸಾಲ, ಬಾಬಿ ಹಾಗೂ ಪ್ರಿಯಾ ವಿನ್ಯಾಸಗೊಳಿಸಿರುವ ಕಾಸ್ಟ್ಯೂಮ್‌ಗಳು ಚಿತ್ರಕ್ಕೆ ವಿಶೇಷ ಕಳೆ ತಂದಿವೆ. ಒಟ್ಟಾರೆಯಾಗಿ ದೊಡ್ಡ ತಾರಾಗಣ ಹಾಗೂ ದಕ್ಷ ತಾಂತ್ರಿಕ ತಂಡದೊಂದಿಗೆ ತಯಾರಾಗುತ್ತಿರುವ ‘ಬೃಂದಾವಿಹಾರಿ’ ಚಿತ್ರದ ಈ ‘ನಾದಸುನಾದ’ ಹಾಡು ಕೇಳುಗರ ಮನ ಗೆಲ್ಲುವ ಭರವಸೆ ಮೂಡಿಸಿದೆ.

