HomeKarnatakaಚುನಾವಣೆಯಿಂದ ನಿವೃತ್ತಿ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ: ಮಾಜಿ ಸಿಎಂ ಸಿದ್ಧರಾಮಯ್ಯ

ಚುನಾವಣೆಯಿಂದ ನಿವೃತ್ತಿ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ: ಮಾಜಿ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತೇನೆ. ಆದರೆ, ಸಕ್ರಿಯ ರಾಜಕಾರಣದಲ್ಲಿರುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಮಾನತೆಯ ಸಂಕಲ್ಪ ಹಿಂದುಳಿದ ವರ್ಗಗಳ ಒಕ್ಕೂಟದ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಚುನಾವಣೆ ವ್ಯವಸ್ಥೆ ಸುಧಾರಣೆಯಾಗಬೇಕು. ನನಗೆ ವಯಸ್ಸಾಗಿದೆ ಎಂದು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಲ್ಲ, ಚುನಾವಣಾ ವ್ಯವಸ್ಥೆ ಸರಿ ಇಲ್ಲ ಎನ್ನುವ ಕಾರಣಕ್ಕೆ ಹೇಳಿದ್ದೇನೆ. ಆದರೆ ನಿಮಗೆ ಸಮಾನ ಅವಕಾಶಗಳು ಸಿಗುವವರೆಗೆ ಹಾಗೂ ಜಾತಿ ವ್ಯವಸ್ಥೆ ಹೋಗುವವರೆಗೆ ನಿಮ್ಮ ಜೊತೆಗಿದ್ದು, ಹೋರಾಟ ಮಾಡುತ್ತೇನೆ. ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ನೀವು ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣೆ ವ್ಯವಸ್ಥೆ ಸರಿಯಿಲ್ಲದ ಕಾರಣ ಹಾಗೆಂದು ಹೇಳಿದ್ದೇನೆ. ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತಿ ಹೊಂದುತ್ತಿದ್ದೇನೆ. ವಯಸ್ಸಾಯ್ತು ಅಂತ ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.

ಹಿಂದುಳಿದ ಜಾತಿಯವನೆಂದು ಹೇಳಲು ಯಾವುದೇ ಮುಜುಗರ ಇಲ್ಲ. ದೇಶದಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆ ಇತ್ತು. ಚಾತುವರ್ಣ ವ್ಯವಸ್ಥೆಯಲ್ಲಿ ನಾನು ಶೂದ್ರ ಜಾತಿಗೆ ಸೇರಿದವನು. ಲಿಂಗಾಯಿತರು, ಒಕ್ಕಲಿಗರು ಆದಿಯಾಗಿ ನಾವೆಲ್ಲರೂ ಶೂದ್ರರೇ. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರಿಗೆ ಮಾತ್ರ ಓದಲು ಅವಕಾಶವಿತ್ತು. ಶೂದ್ರರು ದಡ್ಡರು ಅಂತಲ್ಲ, ಆದರೆ ಅವಕಾಶಗಳು ಇರಲಿಲ್ಲ. ಸಮಾನ ಅವಕಾಶ ನೀಡಿದ್ದರೆ ಅಸಮಾನತೆ ನಿರ್ಮಾಣ ಆಗುತ್ತಿರಲಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಅಹಿಂದ ಹೊಸ ಚಿಂತನೆ

ಅಹಿಂದ ಎಂಬ ಹೊಸ ಚಿಂತನೆಯನ್ನು ಸಿದ್ದರಾಮಯ್ಯ ಹುಟ್ಟು ಹಾಕಿದರು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.

ಸಿದ್ಧರಾಮಯ್ಯ ರಾಜ್ಯದಲ್ಲಿ ಅಹಿಂದ ಕಾರ್ಯಕ್ರಮ ಹೊಸದಾಗಿ ಹುಟ್ಟು ಹಾಕಿದರು. ಅಹಿಂದ ನಮ್ಮೆಲ್ಲರ ರಾಜಕೀಯ ಜೀವನಕ್ಕೆ ಸಹಕಾರಿಯಾಗಿದೆ. ಸಿದ್ದರಾಮಯ್ಯರ ರಾಜಕಾರಣ ಅದು ಹೋರಾಟದ ರಾಜಕಾರಣ. ಬಡವರು ಮತ್ತು ಧ್ವನಿ ಇಲ್ಲದವರ ಪರವಾದ ರಾಜಕಾರಣ ಅವರದ್ದು. ಬಹಳಷ್ಟು ಜನ ಟೀಕೆ ಟಿಪ್ಪಣಿ ಏನು ಬೇಕಾದರೂ ಮಾಡಬಹುದು. ದೇಶದಲ್ಲಿ ಶ್ರೇಣಿಕೃತ ವ್ಯವಸ್ಥೆ ಇದೆ. ಶ್ರೇಣಿಕೃತ ವ್ಯವಸ್ಥೆ ಮೂಲಕ ಮೇಲು ಕೀಳು ಪದ್ಧತಿ ಹುಟ್ಟು ಹಾಕಿದ್ದಾರೆ. ಶ್ರೇಣಿಕೃತ ವ್ಯವಸ್ಥೆ ವಿರುದ್ಧ ಅನೇಕ ನಾಯಕರು ನಿಂತಿದ್ದಾರೆ. ಸಂವಿಧಾನಾತ್ಮಕವಾಗಿ ನಮಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಆಧುನಿಕ ರಾಜಕಾರಣದಲ್ಲಿ ನೀಡಲು ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂದು ಪರಮೇಶ್ವರ ಹೇಳಿದ್ದಾರೆ.

ಎಲ್ಲಾ ಜಾತಿ ಸಮುದಾಯಗಳು ಒಟ್ಟಾಗಿ ಕೆಲಸ ಮಾಡಿದರೆ ರಾಜ್ಯದ ಆಡಳಿತ ಹಿಂದುಳಿದ ವರ್ಗದ ಕೈಯಲ್ಲಿ ಬರಲಿದೆ. ಆಡಳಿತ ಶಾಶ್ವತವಾಗಿ ಹಿಂದುಳಿದ ವರ್ಗದ ಕೈಯಲ್ಲಿ ಬರಲಿದೆ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಅಸಮಾನತೆಯಿಂದ ಜೀವನ ಮಾಡುವಂತೆ ಆಗಬಾರದು. ಹಿಂದುಳಿದ ಜಾತಿಗಳ ಹೋರಾಟ ಇನ್ನಷ್ಟು ಹೆಚ್ಚಾಗಬೇಕು. ಸಮಾನತೆಯ ಹಕ್ಕನ್ನು ನಾವು ದಕ್ಕಿಸಿಕೊಳ್ಳಬೇಕು. ಬೇರೆ ಬೇರೆ ರಾಜ್ಯದಲ್ಲಿ ಇಂತಹ ಹೋರಾಟಗಳು ಇವೆ ಎಂದು ಜಿ. ಪರಮೇಶ್ವರ ಹೇಳಿದ್ದಾರೆ.

ಸಚಿವ ಸಂತೋಷ್ ಲಾಡ್ ಮಾತನಾಡಿ, ಹಿಂದುಳಿದ ವರ್ಗಗಳ ಹೋರಾಟ ಶುರುವಾಗಿ 25 ವರ್ಷವಾಯಿತು. ತಮಿಳುನಾಡಿನಲ್ಲಿ ಶೇಕಡ 69 ರಷ್ಟು ಮೀಸಲಾತಿ ಇದೆ. ಭಾರತದಲ್ಲಿ 45 ರಿಂದ 50 ರಷ್ಟು ಹಿಂದುಳಿದ ವರ್ಗಗಳ ಜನಸಂಖ್ಯೆ ಇದೆ. ಎಲ್ಲರಿಗೆ ಸಮಪಾಲು ಸಮ ಬಾಳು ಆಗಬೇಕು. ವಿಧಾನಸಭೆ, ಲೋಕಸಭೆಯಲ್ಲೂ ಒಬಿಸಿಗೆ ಮೀಸಲಾತಿ ನೀಡಬೇಕು. ಒಬಿಸಿ ಕಾಲಂ ಅನ್ನು ಕೇಂದ್ರ ಸರ್ಕಾರ ಗಣತಿಯಿಂದ ತೆಗೆದುಬಿಟ್ಟಿದೆ. ದೇಶದಲ್ಲಿ 60 ಕೋಟಿಗೂ ಹೆಚ್ಚು ಜನಸಂಖ್ಯೆ ಒಬಿಸಿ ವರ್ಗದವರು ಇದ್ದಾರೆ. ಸಿದ್ದರಾಮಯ್ಯಗೆ ಆಯಸ್ಸು, ಆರೋಗ್ಯ ಹೆಚ್ಚಾಗಲಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular