ಉಡುಪಿ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ತಾಮ್ರ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆ ಕಾರ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಕಳದ ಉಮಿಕಲ್ ಬೆಟ್ಟದ ಮೇಲಿರುವ ಪರಶುರಾಮ ಥೀಮ್ ಪಾರ್ಕ್ ನಿಂದ ತಾಮ್ರದ ಹೊದಿಕೆ ಕಳವು ಮಾಡಲಾಗಿತ್ತು. ಮಂಗಳೂರು ಮೂಲದ ಆರಿಫ್(37), ಅಬ್ದುಲ್ ಹಮೀದ್(32) ಅವರನ್ನು ಬಂಧಿಸಲಾಗಿದೆ.
ಥೀಮ್ ಪಾರ್ಕ್ ನ ಕಟ್ಟಡದ ಮೇಲ್ಛಾವಣಿಗೆ ಹಾಕಿದ್ದ ತಾಮ್ರದ ಹೊದಿಕೆ ಹಲವು ಮಾಡಿದ್ದ ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು.
ಬಂಧಿತರಿಂದ 45,000 ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ ಜಪ್ತಿ ಮಾಡಲಾಗಿದೆ. ಎರಡು ಸೀಲಿಂಗ್ ಫ್ಯಾನ್ ಮತ್ತು ಕೃತ್ಯಕ್ಕೆ ಬಳಸಿದ ಗೂಡ್ಸ್ ಆಟೋ, ಬೈಕ್ ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಕಳ ಪೊಲೀಸರು ಶೋಧ ನಡೆಸಿದ್ದಾರೆ

