ಬೆಂಗಳೂರು: ನಕಲಿ ಬಂಗಾರ ಒತ್ತೆ ಇಟ್ಟು ಸಾಲ ಪಡೆದ ಪ್ರಕರಣದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರಿಗೆ ಸೇರಿದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿಯಲ್ಲಿ ಮಂಜುನಾಥಗೌಡ ಮತ್ತು ಅವರ ಪತ್ನಿ ಹೆಸರಿನಲ್ಲಿನ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಏಪ್ರಿಲ್ 8ರಂದು ಶಿವಮೊಗ್ಗ ಮತ್ತು ಬೆಂಗಳೂರಿನ ವಿವಿಧೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಏಪ್ರಿಲ್ 9ರಂದು ಮಂಜುನಾಥಗೌಡರನ್ನು ಬಂಧಿಸಲಾಗಿತ್ತು. ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ಹಣವನ್ನು ವಂಚಿಸಿದ ಪ್ರಕರಣದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮತ್ತು ಅವರ ಪತ್ನಿಗೆ ಸೇರಿದ ಪ್ರಸ್ತುತ ಮಾರುಕಟ್ಟೆ ಮೌಲ್ಯದ 13.91 ಕೋಟಿ ರೂ.ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಇಡಿ, ಬೆಂಗಳೂರು ವಲಯ ಕಚೇರಿಯು ಪಿಎಂಎಲ್ಎ, 2002 ರ ನಿಬಂಧನೆಗಳ ಅಡಿಯಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿಸಲಾಗಿದೆ.

