ಬೆಂಗಳೂರು: ತಾನು ಬೆಂಗಳೂರಿನ ಪೊಲೀಸ್ ಇಲಾಖೆಯ ಪಿಎಸ್ಐ ಎಂದು ನಂಬಿಸಿ 25ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವತಿಯನ್ನು ನಿವೇದಿತಾ ಗೌಡ ಎಂದು ಗುರುತಿಸಲಾಗಿದೆ.
ನಿವೇದಿತಾ ಗೌಡ ಪಿಎಸ್ಐ ಎಂದು ಪರಿಚಯಿಸಿಕೊಂಡು ಹಲವರಿಂದ ಹಣ, ಚಿನ್ನ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ವಂಚಿಸಿದ್ದಾಳೆ ಎನ್ನಲಾಗಿದೆ. ಪೊಲೀಸ್ ಅಧಿಕಾರಿಯಂತೆ ನಂಬಿಕೆ ಮೂಡಿಸಿ, ವಿವಿಧ ಕಾರಣಗಳನ್ನು ನೀಡಿ ಜನರಿಂದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಪಡೆದುಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.ನಿವೇದಿತಾ ಗೌಡ ಚಿಕ್ಕಮಗಳೂರಲ್ಲಿ ಕೆಫೆ ನಡೆಸುತ್ತಿದ್ದಳು ಎಂದು ತಿಳಿದು ಬಂದಿದೆ.
ಪೊಲೀಸ್ ಇಲಾಖೆಯ ಪಿಎಸ್ಐ ಎಂದು ನಂಬಿಸುವ ರೀತಿಯಲ್ಲಿ ಡ್ರೆಸ್ ಹಾಗೂ ಹೇರ್ಕಟ್ ಮಾಡಿಸಿಕೊಂಡು, ತಾನು ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್ಐ ಎಂದು ಪರಿಚಯಿಸಿಕೊಂಡು ಹಲವರಿಗೆ ವಂಚಿಸಿದ ಆರೋಪ ಕೇಳಿಬಂದಿದೆ. ಪೊಲೀಸ್ ಅಧಿಕಾರಿಯಂತೆ ಕಾಣಿಸಿಕೊಳ್ಳಲು ಸೂಕ್ತವಾದ ವೇಷಭೂಷಣ ಧರಿಸುತ್ತಿದ್ದ ಯುವತಿ, ತಾನು ರಾಜಗೋಪಾಲನಗರ ಠಾಣೆಯ ಪಿಎಸ್ಐ ಎಂದು ಹೇಳಿಕೊಂಡು ಜನರ ವಿಶ್ವಾಸ ಗಳಿಸುತ್ತಿದ್ದಳು ಎನ್ನಲಾಗಿದೆ. ಬಳಿಕ ಇದೇ ಪರಿಚಯವನ್ನು ಬಳಸಿಕೊಂಡು ಹಣ, ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದಳು ಎಂದು ಆರೋಪಿಸಲಾಗಿದೆ.
ಪ್ರಿಯಕರನಿಗೆ ವಂಚನೆಯ ಹಣ?
ವಂಚನೆಯಿಂದ ಸಂಗ್ರಹಿಸಿದ ಹಣವನ್ನು ತನ್ನ ಪ್ರಿಯಕರ ದೇವುಗೆ ನೀಡುತ್ತಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ದೇವು ಕೂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ತನಿಖೆ ಚುರುಕು
ನಿವೇದಿತಾ ಗೌಡಳನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆಕೆ ಎಷ್ಟು ಮಂದಿಗೆ ವಂಚಿಸಿದ್ದಾಳೆ, ಒಟ್ಟು ಎಷ್ಟು ಹಣ ಹಾಗೂ ಚಿನ್ನವನ್ನು ಪಡೆದುಕೊಂಡಿದ್ದಾಳೆ ಮತ್ತು ವಂಚನೆಯ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಹೊರಬರುವ ಸಾಧ್ಯತೆಯಿದೆ.

