ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯಲ್ಲಿ ಎಫ್‌ಎಸ್‌ಎಲ್ ವರದಿಯಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಪ್ರಜ್ವಲ್ ರೇವಣ್ಣ ಅವರ ಮೊಬೈಲ್ ಹಾಗೂ ಪೆನ್‌ಡ್ರೈವ್‌ನಲ್ಲಿದ್ದ ಡೇಟಾ ಪರಿಶೀಲನೆ ವೇಳೆ ಒಟ್ಟು 173 ವಿವಿಧ ಫೈಲ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ 100ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಪೆನ್‌ಡ್ರೈವ್ ಹಾಗೂ ಮೊಬೈಲ್‌ನಿಂದ ಒಟ್ಟು 173 ಫೈಲ್ ಗಳು ಪತ್ತೆಯಾಗಿದ್ದು, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ವಿಡಿಯೋಗಳು ಇರುವುದಾಗಿ ವರದಿಯಾಗಿದೆ. ಈ ಡಿಜಿಟಲ್ ಸಾಕ್ಷ್ಯಗಳನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿದಿದೆ.
ಜೈಲು ಸೇರಿದ ಬಳಿಕವೂ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈ ಮಾಹಿತಿ ಮಹತ್ವ ಪಡೆದಿದೆ. ಜೈಲಿನ ಸೆಲ್‌ನಲ್ಲಿದ್ದ ಟಿವಿ ಮೂಲಕ ಅವರು ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು ಎನ್ನಲಾಗಿದ್ದು, ಕೆಲ ಮಹಿಳೆಯರಿಗೆ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡುತ್ತಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಉಲ್ಲೇಖವಾಗಿದೆ.
ಆಗಸ್ಟ್ 11ರಂದು ಕೇಂದ್ರ ಕಾರಾಗೃಹದ ಭದ್ರತಾ ವಿಭಾಗದ ಬ್ಯಾರಕ್‌ಗಳಲ್ಲಿ ಪೊಲೀಸರು ನಡೆಸಿದ ದಿಢೀರ್ ತಪಾಸಣೆ ವೇಳೆ ಜೈಲಿನಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಚಾರಣಾಧೀನ ಕೈದಿ ಪ್ರತಾಪ್ ರೈ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು. ನಂತರ ಪ್ರಜ್ವಲ್ ರೇವಣ್ಣ ಮೊಬೈಲ್ , ಪೆನ್ ಡ್ರೈವ್ ಗಳನ್ನು ಪೊಲೀಸರು ಎಫ್ ಎಸ್ ಎಲ್ ಗೆ ಕಳುಹಿಸಿದ್ದರು.
ಪ್ರಜ್ವಲ್ ರೇವಣ್ಣ ಅವರ ಮೊಬೈಲ್‌ನಲ್ಲಿದ್ದ ಡೇಟಾವನ್ನು ಪರಿಶೀಲಿಸಿದ ಸಂದರ್ಭದಲ್ಲಿ ಪೊಲೀಸರಿಗೆ ಹಲವು ಮಾಹಿತಿಗಳು ಲಭ್ಯವಾಗಿವೆ ಎನ್ನಲಾಗಿದೆ. ಮೊಬೈಲ್ ಮತ್ತು ಪೆನ್‌ಡ್ರೈವ್‌ನಲ್ಲಿದ್ದ ವಿಡಿಯೋಗಳ ಕುರಿತು ಎಫ್‌ಎಸ್‌ಎಲ್ ತಾಂತ್ರಿಕವಾಗಿ ಪರಿಶೀಲನೆ ನಡೆಸಿದ್ದು, ವರದಿಯಲ್ಲಿ ಒಟ್ಟು 100 ಕ್ಕೂ ಹೆಚ್ಚು ವಿಡಿಯೋಗಳಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪತ್ತೆಯಾದ ವಿಡಿಯೋಗಳು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಸಂಬಂಧಿಸಿದವು ಎಂದು ಹೇಳಲಾಗಿದೆ. ಈ ಡಿಜಿಟಲ್ ಸಾಕ್ಷ್ಯಗಳನ್ನು ತನಿಖೆಯ ಪ್ರಮುಖ ಭಾಗವಾಗಿ ಪರಿಗಣಿಸಲಾಗುತ್ತಿದೆ. ಪ್ರಜ್ವಲ್ ರೇವಣ್ಣಗೆ ವಿಡಿಯೋ ಕಾಲ್ ಮಾಡಿದ್ದ ಮಹಿಳೆಯರನ್ನು ಪೊಲೀಸರು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಅವರ ಮೊಬೈಲ್‌ನಿಂದ ಲಭ್ಯವಾದ ಡೇಟಾ ಹಾಗೂ ಪೆನ್‌ಡ್ರೈವ್‌ನಲ್ಲಿರುವ ಮಾಹಿತಿಯನ್ನು ಪೊಲೀಸರು ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ. ಸದ್ಯ ಪೆನ್‌ಡ್ರೈವ್ ಅನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿರುವ ಮಾಹಿತಿಯನ್ನು ಮತ್ತಷ್ಟು ಪರಿಶೀಲಿಸಲಾಗುತ್ತಿದೆ.
ಡಿಜಿಟಲ್ ಸಾಧನಗಳಿಂದ ದೊರೆತಿರುವ ಮಾಹಿತಿಯ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಿರುವ ಎಸ್‌ಐಟಿ, ವಿಡಿಯೋಗಳ ಮೂಲ, ಅವುಗಳಲ್ಲಿರುವ ವ್ಯಕ್ತಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಇತರ ಡಿಜಿಟಲ್ ದಾಖಲೆಗಳ ಕುರಿತು ಪರಿಶೀಲನೆ ನಡೆಸುತ್ತಿದೆ.
ಎಫ್‌ಎಸ್‌ಎಲ್ ವರದಿಯಲ್ಲಿ 173 ವಿಡಿಯೋಗಳು ಪತ್ತೆಯಾಗಿರುವ ಮಾಹಿತಿ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮುಂದಿನ ತನಿಖೆಯಲ್ಲಿ ಈ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ಪರಪ್ಪನ ಅಗ್ರಹಾರ ಜೈಲಿನ ಮೊಬೈಲ್ ಜಾಲ ಪತ್ತೆ; 9 ಮಂದಿ ಬಂಧನ
ಇನ್ನೂ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಅಕ್ರಮವಾಗಿ ಮೊಬೈಲ್ ಫೋನ್‌ಗಳ ಬಳಕೆ ಮತ್ತು ಪೂರೈಕೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ದಾಖಲಾಗಿರುವ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಜೈಲು ಸಿಬ್ಬಂದಿ ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.
ಆಗಸ್ಟ್ 11ರಂದು ಕೇಂದ್ರ ಕಾರಾಗೃಹದ ಭದ್ರತಾ ವಿಭಾಗದ ಬ್ಯಾರಕ್‌ಗಳಲ್ಲಿ ಪೊಲೀಸರು ನಡೆಸಿದ ದಿಢೀರ್ ತಪಾಸಣೆ ವೇಳೆ ಜೈಲಿನಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಚಾರಣಾಧೀನ ಕೈದಿ ಪ್ರತಾಪ್ ರೈ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ತನಿಖೆಯ ಬಳಿಕ ಜೈಲು ಸಿಬ್ಬಂದಿಗಳಾದ ಪ್ರಕಾಶ್ ಮಹಾವೀರ್, ವಿಜಯ್ ಕುಮಾರ್ ಹಾಗೂ ಶ್ರೀನಿವಾಸ್ ನಾಯ್ಕ್, ವಿಚಾರಣಾಧೀನ ಕೈದಿ ಪ್ರತಾಪ್ ರೈ, ಪ್ರಜ್ವಲ್ ರೇವಣ್ಣ ಸೇರಿದಂತೆ ನವೀನ್ ಕುಮಾರ್, ಸಿದ್ಧಿಕ್, ಮೊಹಮದ್ ತೌಸಿಫ್ ಹಾಗೂ ಮಂಜುನಾಥ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖೆಯಲ್ಲಿ ಜೈಲಿನೊಳಗೆ ಮೊಬೈಲ್ ಪೂರೈಕೆಗೆ ದೊಡ್ಡ ಮೊತ್ತದ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಒಂದು ಮೊಬೈಲ್‌ಗೆ ₹1 ಲಕ್ಷ ಹಾಗೂ ಒಂದು ಸಿಮ್ ಕಾರ್ಡ್‌ಗೆ ₹50 ಸಾವಿರ ಪಡೆಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಸಿಮ್‌ಗಳ ತಾಂತ್ರಿಕ ಮಾಹಿತಿಯನ್ನು ಸಿಇಐಆರ್ ಪೋರ್ಟಲ್ ಮೂಲಕ ಪರಿಶೀಲಿಸಿದಾಗ ಅವು ಜೈಲು ಸಿಬ್ಬಂದಿ ಶ್ರೀನಿವಾಸ್ ನಾಯ್ಕ್ ಬಳಿ ಇದ್ದ ಎರಡು ಮೊಬೈಲ್‌ಗಳಲ್ಲಿ ಬಳಕೆಯಾಗಿರುವುದು ಪತ್ತೆಯಾಗಿದೆ. ವಿಚಾರಣೆ ವೇಳೆ ಸುಮಾರು 12 ಮೊಬೈಲ್‌ಗಳನ್ನು ಖರೀದಿಸಿ ಜೈಲಿನೊಳಗೆ ಅಕ್ರಮವಾಗಿ ಪೂರೈಕೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.
ಇನ್ನೊಂದು ಪ್ರಕರಣದಲ್ಲಿ ಜೈಲಿನಲ್ಲಿ ಪತ್ತೆಯಾದ ಮೊಬೈಲ್ ಹಾಗೂ ಸಿಮ್‌ಗೆ ಸಂಬಂಧಿಸಿದ ತನಿಖೆಯಲ್ಲಿ, ಅದನ್ನು ಖರೀದಿಸಿದ್ದ ವ್ಯಕ್ತಿಯ ಸುಳಿವು ಪತ್ತೆಯಾಗಿದ್ದು, ಜೈಲು ಸಿಬ್ಬಂದಿಯೊಬ್ಬರು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.
ಇದಲ್ಲದೆ, ಸಿಸಿಬಿ ಪೊಲೀಸರು ದಾಖಲಿಸಿದ ಮತ್ತೊಂದು ಪ್ರಕರಣದಲ್ಲಿ ಪ್ರತಾಪ್ ರೈ ಹಾಗೂ ಪ್ರಜ್ವಲ್ ರೇವಣ್ಣ ಅವರ ಕೊಠಡಿಯಲ್ಲಿ ಪತ್ತೆಯಾದ ಮೊಬೈಲ್ ಮತ್ತು ಸಿಮ್‌ಗಳನ್ನು ಜೈಲು ವಾರ್ಡರ್ ಸಿಬ್ಬಂದಿ ಮೂಲಕ ಒಳಗೆ ಸಾಗಿಸಿರುವುದು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.
ಒಟ್ಟಾರೆ ಮೂರು ಪ್ರಕರಣಗಳ ತನಿಖೆಯ ಮೂಲಕ ಪರಪ್ಪನ ಅಗ್ರಹಾರ ಜೈಲಿನೊಳಗೆ ಮೊಬೈಲ್‌ಗಳ ಅಕ್ರಮ ಬಳಕೆ ಮತ್ತು ಪೂರೈಕೆಯ ಜಾಲದ ಹಲವು ವಿವರಗಳು ಹೊರಬಂದಿವೆ. ಪ್ರಕರಣದ ತನಿಖೆ ಮುಂದುವರಿದಿದೆ.

