ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮೂವರನ್ನು ರಕ್ಷಣೆ ಮಾಡಲಾಗಿದೆ.
ಬೆಂಗಳೂರಿನ ಗಾಯತ್ರಿ ನಗರದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಅಗ್ನಿ ದುರಂತದಲ್ಲಿ 53 ವರ್ಷದ ಸವಿತಾ ಸಾವನ್ನಪ್ಪಿದ್ದಾರೆ. ಗುತ್ತಿಗೆದಾರ ರಮೇಶ್ ಬಾಬು ಅವರ ಮನೆಯಲ್ಲಿ ಬೆಂಕಿ ತಗುಲಿ ಅವಘಡ ಸಂಭವಿಸಿದೆ. ನಾಲ್ಕು ಅಂತಸ್ತಿನ ಮನೆಯಲ್ಲಿ ರಮೇಶ್ ಕುಟುಂಬ ವಾಸವಾಗಿದ್ದು, ಮೂರನೇ ಮಹಡಿಯ ಅಡುಗೆ ಕೋಣೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ.
ಘಟನೆಯಲ್ಲಿ ರಮೇಶ್ ಬಾಬು ಪತ್ನಿ ಸವಿತಾ ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮೂವರನ್ನು ರಕ್ಷಣೆ ಮಾಡಿದ್ದಾರೆ. ರಮೇಶ್ ಬಾಬು, ತಾಯಿ ಸಣ್ಣಮ್ಮ ಮತ್ತು ಮಗನನ್ನು ರಕ್ಷಣೆ ಮಾಡಲಾಗಿದೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

