ಬೆಳಗಾವಿಯಲ್ಲಿ ಪ್ರಭಾವಿ ವಕೀಲರೊಬ್ಬರ ಮನೆ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೂಜಾ ಕಾಕತಕರ್ ಅವರ ಮನೆಯ ಮೇಲೆ ನಿನ್ನೆ ತಡರಾತ್ರಿ ಒಂದರಿಂದ ಎರಡು ಗಂಟೆಯ ನಡುವೆ ಗುಂಡಿನ ದಾಳಿ ನಡೆಸಲಾಗಿದೆ.
ಮನೆಯ ಮೊದಲ ಮಹಡಿಯಲ್ಲಿ ಪೂಜಾ ಅವರ ಪುತ್ರಿ ಸಂಸ್ಕೃತಿ ಓದುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿರುವ ಪೂಜಾ ಕಾಕತಕರ್ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿದ್ದು, ಮೊದಲ ಮಹಡಿಯಲ್ಲಿನ ಕಿಟಕಿ ಗಾಜಿಗೆ ಹಾನಿಯಾಗಿದೆ.
ಗಾಜಿನ ಮೇಲೆ ಫೈರಿಂಗ್ ಗುರುತು ಇದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಂಡು ಹಾಗೂ ಕಿಟಕಿ ಗಾಜನ್ನು ಪರಿಶೀಲನೆಗಾಗಿ ಎಫ್ಎಸ್ಎಲ್ ಗೆ ರವಾನಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
18 ವರ್ಷಗಳಿಂದ ಪೂಜಾ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೈಪ್ರೊಫೈಲ್ ಕೇಸ್ ಗಳನ್ನು ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಗುಂಡಿನ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

