ಹೈದರಾಬಾದ್: ಟಾಲಿವುಡ್ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಆಶು ರೆಡ್ಡಿ ವಿರುದ್ಧ ಬರೋಬ್ಬರಿ 9.35 ಕೋಟಿ ರೂಪಾಯಿ ವಂಚನೆಯ ಆರೋಪ ಕೇಳಿ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಆಶು ರೆಡ್ಡಿ ವಿರುದ್ಧ ಅನಿವಾಸಿ ಭಾರತೀಯ ಯುವಕನೋರ್ವ ಬರೋಬ್ಬರಿ 9.35 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಆಶು ರೆಡ್ಡಿ ಹಾಗೂ ಅವರ ಕುಟುಂಬದ ವಿರುದ್ಧ ದೂರು ನೀಡಲಾಗಿದೆ.
ಹೈದರಾಬಾದ್ನ ಶೇಕ್ಪೇಟ್ ನಿವಾಸಿ ಸತ್ಯನಾರಾಯಣ ಎಂಬುವವರು ಹೈದರಾಬಾದ್ನ ಸೆಂಟ್ರಲ್ ಕ್ರೈಮ್ ಸ್ಟೇಷನ್ ಪೊಲೀಸರಿಗೆ ನಟಿ ಆಶು ರೆಡ್ಡಿ ವಿರುದ್ಧ ದೂರು ನೀಡಿದ್ದಾರೆ. ಸತ್ಯನಾರಾಯಣ ಅವರ ಮಗ ಧರ್ಮೇಂದ್ರ ಲಂಡನ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, 2018ರಲ್ಲಿ ಹೈದರಾಬಾದ್ನಲ್ಲಿ ಧರ್ಮೇಂದ್ರ ಹಾಗೂ ಆಶು ರೆಡ್ಡಿ ನಡುವೆ ಪರಿಚಯವಾಗಿತ್ತು. ಈ ಸ್ನೇಹ ಮುಂದೆ ಪ್ರೇಮಕ್ಕೆ ತಿರುಗಿ, ಆಶು ರೆಡ್ಡಿ ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರುದಾರರ ಪ್ರಕಾರ, 2018 ರಿಂದ 2025 ರ ಅವಧಿಯಲ್ಲಿ ಆಶು ರೆಡ್ಡಿ ವಿವಿಧ ಕಾರಣಗಳನ್ನು ನೀಡಿ ಧರ್ಮೇಂದ್ರ ಅವರಿಂದ ಸುಮಾರು 9.35 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಈ ಹಣದಲ್ಲಿ ಐಷಾರಾಮಿ ಕಾರುಗಳು, ಸುಮಾರು 5 ಕೆಜಿ ಚಿನ್ನ ಮತ್ತು ಹೈದರಾಬಾದ್ನ ಲಾಂಕೋ ಹಿಲ್ಸ್ನಂತಹ ಪ್ರದೇಶಗಳಲ್ಲಿ ಫ್ಲ್ಯಾಟ್ಗಳನ್ನು ಖರೀದಿಸಲಾಗಿದ್ದು, ಇವೆಲ್ಲವನ್ನೂ ಆಶು ರೆಡ್ಡಿ ಅವರ ಹೆಸರಿನಲ್ಲೇ ನೋಂದಣಿ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಆಶು ರೆಡ್ಡಿ ಅವರ ಸಹೋದರಿ ಕೂಡ 50 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು ಅದನ್ನೂ ಸಹ ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ನಟಿ ಆಶು ರೆಡ್ಡಿ ಮದುವೆಗೆ ನಿರಾಕರಿಸಿದಾಗ, ನಟಿ ಹೇಮಾ ಅವರ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಆಗ 70 ಲಕ್ಷ ರೂಪಾಯಿ ಮರಳಿಸುವುದಾಗಿ ಒಪ್ಪಿ ಚೆಕ್ ನೀಡಿದ್ದರು, ಬಳಿಕ ಆ ಚೆಕ್ಗಳನ್ನು ನಾಶಪಡಿಸಿ ವಂಚಿಸಿದ್ದಾರೆ ಎಂದು ಧರ್ಮೇಂದ್ರ ಕುಟುಂಬಸ್ಥರು ದೂರಿದ್ದಾರೆ.
ತನ್ನ ವಿರುದ್ಧದ ಆರೋಪಗಳಿಗೆ ಆಶು ರೆಡ್ಡಿ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯೆ ನೀಡಿದ್ದು. ನನ್ನ ಅನುಮತಿಯಿಲ್ಲದೆ ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ಆಧಾರರಹಿತ ಮಾಹಿತಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಪ್ರಸ್ತುತ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಕಾನೂನುಬದ್ಧವಾಗಿ ಹೋರಾಡುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ತೆಲಂಗಾಣದಲ್ಲಿ ಸದ್ದು ಮಾಡಿದ್ದ ಡ್ರಗ್ಸ್ ಪ್ರಕರಣವೊಂದರಲ್ಲಿ ಆಶು ರೆಡ್ಡಿ ಹೆಸರು ಕೇಳಿಬಂದಿತ್ತು. ಆದರೆ ಆಗಲೂ ಅವರು ತಮಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಪ್ರಸ್ತುತ ಹೈದರಾಬಾದ್ ಪೊಲೀಸರು ವಂಚನೆ ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ (EOW) ವರ್ಗಾಯಿಸಿದ್ದು, ತನಿಖೆ ತೀವ್ರಗೊಂಡಿದೆ. ನಟಿ ಆಶು ರೆಡ್ಡಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಒಂದು ವೇಳೆ ಈ ಆರೋಪಗಳು ಸಾಬೀತಾದಲ್ಲಿ, ಆಶು ರೆಡ್ದಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

