ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗಂಡಿನ ಸದ್ದು ಮೊಳಗಿದೆ. ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಜೀವ(19) ಗುಂಡೇಟು ತಿಂದ ರೌಡಿಶೀಟರ್. ಸಿಂಗೇನ ಅಗ್ರಹಾರದ ತೋಪಿನಲ್ಲಿ ಹೆಬ್ಬಗೋಡಿ ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದು, ಗಾಯಾಳು ಆರೋಪಿಯನ್ನು ವಶಕ್ಕೆ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಬ್ಬಗೋಡಿಯ ತಿರುಪಾಳ್ಯದಲ್ಲಿ ವಾಸವಾಗಿರುವ ರೌಡಿಶೀಟರ್ ಜೀವ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಸಬ್ ಇನ್ಸ್ಪೆಕ್ಟರ್ ಅಯ್ಯಪ್ಪ ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ.
ಕಳೆದ ವಾರ ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ದರೋಡೆ ಮಾಡಿದ್ದ ರೌಡಿಶೀಟರ್ ಜೀವ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಬಂಧನಕ್ಕೆ ತೆರಳಿದ ವೇಳೆ ಪೊಲೀಸ್ ಸಿಬ್ಬಂದಿ ನಾಗೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿ ಆಗಲು ಯತ್ನಿಸಿದಾಗ ಸಬ್ ಇನ್ಸ್ಪೆಕ್ಟರ್ ಅಯ್ಯಪ್ಪ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

