ಮಂಡ್ಯ: ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಕಳ್ಳತನ ಮತ್ತು ಸಿಸಿಟಿವಿ ಕ್ಯಾಮೆರಾ ನಾಶ ಮಾಡಿದ ಆರೋಪದ ಮೇಲೆ ಅರ್ಚಕ ನಾರಾಯಣಭಟ್ಟ ಸೇರಿ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಚೆಲುವನಾರಾಯಣ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರು ನೀಡಿದ ಅನ್ವಯ ಪಾರು ಪತ್ತೆದಾರ ಶ್ರೀಧರ್, ಅರ್ಚಕ ನಾರಾಯಣ ಭಟ್ಟ, ಪರಿಚಾರಕ ತಿರುವೇಂಗಡಾಚಾರ್, ಕಾವಲುಗಾರ ಎಂ.ಬಿ. ಗಂಗಾಧರ್, ಬಸವರಾಜು, ಮಣೆಗಾರ ಕಸ್ತೂರಿ ಶ್ರೀನಿವಾಸನ್ ವಿರುದ್ಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಾಲಯದ ಹುಂಡಿಗಳಲ್ಲಿದ್ದ ಚಿನ್ನ, ಬೆಳ್ಳಿ, ಕಾಣಿಕೆ ಹಣ ಮತ್ತು ಸಿಸಿಟಿವಿ ಕ್ಯಾಮೆರಾ ಕಳ್ಳತನಕ್ಕೆ ಸಂಬಂಧಿಸಿದಂತೆ ದೂರು ನೀಡಲಾಗಿತ್ತು.
ಯೋಗಾನರಸಿಂಹಸ್ವಾಮಿ ದೇವಾಲಯದ ಹುಂಡಿಯಲ್ಲಿ ಕಳ್ಳತನವಾಗುತ್ತಿರುವ ಬಗ್ಗೆ ಶಂಕೆ ಇದ್ದು, ಇದನ್ನು ಕಂಡು ಹಿಡಿಯಲು ಗರ್ಭ ಗುಡಿ ಮತ್ತು ಇತರೆಡೆ ರಹಸ್ಯ ಕ್ಯಾಮೆರಾ ಅಳವಡಿಸಲಾಗಿತ್ತು. ಕಳೆದ ಜನವರಿ 5ರಂದು ಮಧ್ಯಾಹ್ನ ಕ್ಯಾಮೆರಾಗಳನ್ನು ನಾಶಪಡಿಸಿ ಡಿವಿಆರ್ ಸುಟ್ಟು ಹಾಕಲಾಗಿತ್ತು. ಹೀಗಾಗಿ ಕರ್ತವ್ಯದಲ್ಲಿದ್ದ ಎಲ್ಲರಿಗೂ ನೋಟಿಸ್ ನೀಡಿದ್ದು, ಇದಕ್ಕೆ ಸಮರ್ಪಕ ಉತ್ತರ ನೀಡಿರಲಿಲ್ಲ. ಹೀಗಾಗಿ ಸಿಸಿಟಿವಿ ಕ್ಯಾಮೆರಾ ನಾಶವಾದ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರು ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

