ರಾಮನಗರ: ರಸ್ತೆ ಬದಿಯ ಫೆನ್ಸಿಂಗ್ ಗೆ ಬಸ್ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ಪುಟ್ಟಪ್ಪನದೊಡ್ಡಿಬಳಿ ಅಪಘಾತ ಸಂಭವಿಸಿದೆ.
ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ಬದಿಯ ಫೆನ್ಸಿಂಗ್ ಗೆ ಡಿಕ್ಕಿ ಹೊಡೆದಿದೆ. ಪಿಕೆ ಟ್ರಾವೆಲ್ಸ್ ಬಸ್ ನಲ್ಲಿದ್ದ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮುಂಜಾನೆ ಘಟನೆ ನಡೆದಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೇರಳದ ಕಾಜಿಕೋಟೆಯ ಮೊಹಮ್ಮದ್ ಫರಾನ್(22), ಸೆಲ್ವಿ(45), ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿ ರಶೀದ್(45) ಹಾಗೂ ಆಡುಗೋಡಿಯ ಅಣ್ಣೆಪಾಳ್ಯ ನಿವಾಸಿ ಸಾಕೇರ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೇರಳದ ಕಣ್ಣೂರಿನ ಅಬ್ದುಲ್ ಮತ್ತು ಅಲೆನ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

