ಬೆಂಗಳೂರು : ಹೊಸ ಹಣಕಾಸು ವರ್ಷ ಆರಂಭವಾಗುತ್ತಿರುವ ಬೆನ್ನಲ್ಲೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳು ಘಟಿಸುತ್ತಿವೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಎಚ್‌ಡಿಎಫ್‌ಸಿ (HDFC) ಮತ್ತು ಪಿಎನ್‌ಬಿ (PNB) ಸೇರಿದಂತೆ ಪ್ರಮುಖ ಬ್ಯಾಂಕುಗಳು ನಗದು ಹಿಂಪಡೆಯುವಿಕೆ ಮತ್ತು ಕಾರ್ಡ್ ಬಳಕೆ ನಿಯಮಗಳಲ್ಲಿ ಮಹತ್ವದ ತಿದ್ದುಪಡಿ ತಂದಿವೆ. ಇದರಿಂದ ಗ್ರಾಹಕರು ಇನ್ಮುಂದೆ ಹಣ ವಿತ್‌ಡ್ರಾ ಮಾಡುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಏಪ್ರಿಲ್ 1 ರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ಮುಖ್ಯವಾಗಿ ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ತನ್ನ ಎಟಿಎಂ ನಗದು ವಿತ್‌ಡ್ರಾ ಲೆಕ್ಕಾಚಾರದ ವಿಧಾನವನ್ನು ಪರಿಷ್ಕರಿಸಿದೆ.
ಪ್ರಮುಖ ಬದಲಾವಣೆಗಳು:
- HDFC ಬ್ಯಾಂಕ್ ಹೊಸ ನಿಯಮ: ಇನ್ನು ಮುಂದೆ ಡೆಬಿಟ್ ಕಾರ್ಡ್‌ಗಳ ಜೊತೆಗೆ UPI ಆ್ಯಪ್‌ಗಳ ಮೂಲಕ ಮಾಡುವ ನಗದು ವಿತ್‌ಡ್ರಾವನ್ನು ಸಹ ಉಚಿತ ವಹಿವಾಟುಗಳ ಕೋಟಾದಲ್ಲೇ ಪರಿಗಣಿಸಲಾಗುತ್ತದೆ. ನಿಗದಿತ ಮಿತಿ ದಾಟಿದ ನಂತರ ಮಾಡುವ ಪ್ರತಿಯೊಂದು ವಹಿವಾಟಿಗೆ ₹23 ಮತ್ತು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
- ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): ಪಿಎನ್‌ಬಿ ತನ್ನ ಡೆಬಿಟ್ ಕಾರ್ಡ್‌ಗಳ ಮೇಲಿನ ದೈನಂದಿನ ನಗದು ವಿತ್‌ಡ್ರಾ ಮಿತಿಯನ್ನು ಕಡಿಮೆ ಮಾಡಿದೆ. ಗ್ರಾಹಕರ ರಿಸ್ಕ್ ಮ್ಯಾನೇಜ್‌ಮೆಂಟ್‌ನ ಭಾಗವಾಗಿ, ಕಾರ್ಡ್ ಪ್ರಕಾರಕ್ಕೆ ಅನುಗುಣವಾಗಿ ಈ ಮಿತಿಯನ್ನು ₹50,000 ದಿಂದ ₹75,000 ನಡುವೆ ನಿಗದಿಪಡಿಸಿದೆ.
- ಜಿಯೋ ಪೇಮೆಂಟ್ಸ್ ಬ್ಯಾಂಕ್: ತನ್ನ ಗ್ರಾಹಕರಿಗಾಗಿ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕ ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳ ಬಳಿ ನಗದು ಪಡೆಯುವ ಹೊಸ ಸೌಲಭ್ಯವನ್ನು ಪರಿಚಯಿಸಿದೆ.
- ರೂಪೇ (RuPay) ಪ್ಲಾಟಿನಂ ಕಾರ್ಡ್: ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳ ಮೇಲೆ ಉಚಿತ ಏರ್‌ಪೋರ್ಟ್ ಲಾಂಜ್ ಆಕ್ಸೆಸ್ (Lounge Access) ಪಡೆಯಬೇಕಾದರೆ, ಇನ್ನು ಮುಂದೆ ಕಡ್ಡಾಯವಾಗಿ ನಿಗದಿತ ಮೊತ್ತವನ್ನು ಖರ್ಚು ಮಾಡಿರಬೇಕು ಎಂಬ ನಿಯಮವನ್ನು NPCI ಜಾರಿಗೆ ತಂದಿದೆ.

