ಉಡುಪಿ : ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಬೀಚ್ ಬಳಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರಿದ್ದ ಬಸ್ ಒಂದು ಪೆಟ್ರೋಲ್ ಟ್ಯಾಂಕರ್’ಗೆ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66, ಬೈಂದೂರು ತಾಲೂಕಿನ ತ್ರಾಸಿ ಬೀಚ್ ಸಮೀಪ ಈ ಅಪಘಾತ ಸಂಭವಿಸಿದೆ. ಬಸ್ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್’ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಬೀಚ್ ಬಳಿ ಇಂದು ಘಟನೆ ನಡೆದಿದೆ. ಪ್ರವಾಸಿಗರಿದ್ದ ಬಸ್ ಹಾಗೂ ಪೆಟ್ರೋಲ್ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದು, ಪ್ರವಾಸಕ್ಕೆ ಬಂದಿದ್ದವರ ಕನಸು ಅರ್ಧಕ್ಕೇ ಕಮರಿ ಹೋಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕದ ಛಾಯೆ ಆವರಿಸಿದೆ. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ರಂಭಾಪುರಿ ಕಾಲೇಜಿನ ವಿದ್ಯಾರ್ಥಿಗಳು ಕರಾವಳಿ ಭಾಗಕ್ಕೆ ಪ್ರವಾಸಕ್ಕೆ ಬಂದಿದ್ದರು. ಗಾಯಾಳುಗಳನ್ನು ಉಡುಪಿ ಹಾಗೂ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.

