HomeLatest NewsBREAKING: ಸಿನಿಮಾ ತಾರೆಯರು ನಿಜ ಜೀವನದಲ್ಲೂ ಮೌಲ್ಯಯುತವಾಗಿರಬೇಕು: ಸಿಎಂ ಸಿದ್ಧರಾಮಯ್ಯ

BREAKING: ಸಿನಿಮಾ ತಾರೆಯರು ನಿಜ ಜೀವನದಲ್ಲೂ ಮೌಲ್ಯಯುತವಾಗಿರಬೇಕು: ಸಿಎಂ ಸಿದ್ಧರಾಮಯ್ಯ

ಮೈಸೂರು: ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ ಜೀವನದಲ್ಲೂ ನಡೆದುಕೊಳ್ಳಬೇಕು. ಡಾ.ರಾಜ್ ಕುಮಾರ್ ಅವರು ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು. ಈ ಕಾರಣಕ್ಕೇ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಮೈಸೂರಿನ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ 2018 ಮತ್ತು 19ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಿನಿಮಾ ಅತ್ಯಂತ ಪ್ರಭಾವೀ ಮಾಧ್ಯಮ. ಸಮಾಜದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಸಿನಿಮಾ ತಾರೆಯರು ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅಷ್ಟೇ ಮೌಲ್ಯಯುತವಾಗಿ ಬದುಕಬೇಕು. ಸಮಾಜವನ್ನು ತಿದ್ದುವ ಸಿನಿಮಾಗಳನ್ನು ಹೆಚ್ಚೆಚ್ಚು ತಯಾರಿಸಿದರೆ ಅದರಿಂದ ಬದಲಾವಣೆ ಸಾಧ್ಯ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ಸರ್ಕಾರ ಕನ್ನಡ ಸಿನಿಮೋದ್ಯಮದ ಆರೋಗ್ಯಕಾರಿ ಪ್ರಗತಿ ಮತ್ತು ಬೆಳವಣಿಗೆಗೆ ಸದಾ ಬೆಂಬಲ ನೀಡುತ್ತದೆ. ಕೇವಲ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ. ಒಳ್ಳೆ ಸಿನಿಮಾ ಮಾಡಿ, ಜನ ಮೆಚ್ಚುವ, ಸಮಾಜದ ಮೇಲೆ ಉತ್ತಮ‌ ಪರಿಣಾಮ ಬೀರುವ ಸಿನಿಮಾ ಮಾಡಿದರೆ ಸಬ್ಸಿಡಿ ನೀಡಿದ್ದಕ್ಕೂ ಸಾರ್ಥಕವಾಗುತ್ತದೆ. ಸದ್ಯ ಬಾಕಿ ಇರುವ ಎಲ್ಲಾ ವರ್ಷದ ಸಬ್ಸಿಡಿಯನ್ನೂ ಒಟ್ಟಿಗೇ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿ ಮಾಡಲು 160 ಎಕರೆ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಎರಡು ತಿಂಗಳಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಚಿತ್ರನಗರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.

ಹಿಂದಿನ ಸರ್ಕಾರ ಆಯಾ ವರ್ಷವೇ ಚಲನಚಿತ್ರ ಪ್ರಶಸ್ತಿಗಳನ್ನು ವಿತರಿಸದ ಕಾರಣಕ್ಕೇ 2018ನೇ ಸಾಲಿನಿಂದ ಪ್ರಶಸ್ತಿಗಳು ಬಾಕಿ ಉಳಿದಿವೆ. ಇದು ತಪ್ಪು ಹೀಗಾಗಬಾರದು. ಆದ್ದರಿಂದ ನಮ್ಮ ಸರ್ಕಾರ ಇನ್ನು ಮುಂದೆ ಪ್ರತೀ ವರ್ಷ ಸಿನಿಮಾ ಪ್ರಶಸ್ತಿಗಳನ್ನು ನೀಡಲಿದೆ ಎಂದರು.

ಆಯಾ ವರ್ಷದ ಸಿನಿಮಾಗಳಿಗೆ ಮರು ವರ್ಷವೇ ಪ್ರಶಸ್ತಿ ಕೊಟ್ಟರೆ ಮಾತ್ರ ಅರ್ಥಪೂರ್ಣ ಆಗಿರುತ್ತದೆ. ಇಂದು ಎರಡು ವರ್ಷದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಹಳೆ ಸರ್ಕಾರದ ಅವಧಿಯ ಇನ್ನೆರಡು ವರ್ಷದ ಸಿನಿಮಾ ಪ್ರಶಸ್ತಿಗಳನ್ನು ನೀಡಲು ಸೂಚನೆ ನೀಡಿದ್ದೇನೆ. ಬಳಿಕ ಆಯಾ ವರ್ಷದ ಪ್ರಶಸ್ತಿಗಳನ್ನು ಮರು ವರ್ಷದ ಆರಂಭದಲ್ಲೇ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮೊದಲೆಲ್ಲಾ ಸಿನಿಮಾಗಳ ಸಂಖ್ಯೆ ಕಡಿಮೆ ಇತ್ತು. ನಾವು ನೋಡಿದ್ದನ್ನೇ ಮತ್ತೆ ಮತ್ತೆ ನೋಡುತ್ತಿದ್ದೆವು. ಈಗ ಸಿಕ್ಕಾಪಟ್ಟೆ ಸಿನಿಮಾಗಳು ಬರುತ್ತಿವೆ. ಆದರೆ, ಸಾಮಾಜಿಕ ಕಾಳಜಿ ಮತ್ತು ಗುಣಮಟ್ಟ ಕಡಿಮೆ ಆಗುತ್ತಿದೆ. ಆದ್ದರಿಂದ ಈಗ ಸಿನಿಮಾ ನೋಡುವುದನ್ನೇ ಕಡಿಮೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular