ಮಂಗಳೂರು: ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ನಕಲಿ ಹಾಲ್ ಟಿಕೆಟ್ ಸೃಷ್ಟಿಸಿದ್ದ ಆರೋಪದ ಮೇಲೆ ಕಡಬ ಮೂಲದ ಯುವಕನನ್ನು ಮಂಗಳೂರು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿ ಯಜ್ಞೇಶ್ ಬಿ.ಜೆ. ರೈ(22) ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ-2026ರ ಸಹಿಷ್ಣುತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ (ET & PST) ಸೆ.28ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು.
ಈ ವೇಳೆ ಯಜ್ಞೇಶ್ ನೋಂದಣಿ ಕೇಂದ್ರದಲ್ಲಿ CPC5225446 ಸಂಖ್ಯೆಯ ಹಾಲ್ ಟಿಕೆಟ್ ಅನ್ನು ಹಾಜರುಪಡಿಸಿದ್ದರು. ಅಧಿಕಾರಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಒದಗಿಸಿದ್ದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ, ಅವರ ಹೆಸರು ಅಥವಾ ಅರ್ಜಿ ಸಂಖ್ಯೆ 1:5 ಅರ್ಹತಾ ಪಟ್ಟಿಯಲ್ಲಿ ಕಂಡುಬಂದಿಲ್ಲ. ಹೀಗಾಗಿ ಅವರಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಿಲ್ಲ.
ಪೊಲೀಸರ ವಿಚಾರಣೆಯಲ್ಲಿ, ಆರೋಪಿಯು ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಲಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಮತ್ತೊಬ್ಬ ಅಭ್ಯರ್ಥಿಯ ಹಾಲ್‌ಟಿಕೆಟ್ ಪಡೆದು, ಅದರಲ್ಲಿ ತನ್ನ ಹೆಸರು ಮತ್ತು ವೈಯಕ್ತಿಕ ವಿವರಗಳನ್ನು AI ತಂತ್ರಜ್ಞಾನದ ಮೂಲಕ ಬದಲಿಸಿ ನಕಲಿ ಪ್ರವೇಶ ಪತ್ರ ಸಿದ್ಧಪಡಿಸಿದ್ದಾನೆ ಎಂದು ಹೇಳಲಾಗಿದೆ.
ಆತನ ಮೊಬೈಲ್ ಪರಿಶೀಲನೆಯ ವೇಳೆ ಹಾಲ್ ಟಿಕೆಟ್ ಎಡಿಟ್ ಮಾಡಿರುವುದಕ್ಕೆ ಸಂಬಂಧಿಸಿದ ಡಿಜಿಟಲ್ ಪುರಾವೆಗಳು ಪತ್ತೆಯಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ನೀಡಿದ ದೂರಿನ ಆಧಾರದ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ BNSನ ಕಲಂ 336(1), 336(3) ಹಾಗೂ 318(4) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಮುಖ ಅಂಶ: ನಕಲಿ ಹಾಲ್ ಟಿಕೆಟ್ ಸಿದ್ಧಪಡಿಸಲು ಬಳಸಿದ ತಂತ್ರಜ್ಞಾನ ಹಾಗೂ ಇದಕ್ಕೆ ಇನ್ನಾರಾದರೂ ಸಹಕರಿಸಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಎಂ.ಆರ್.ಎಸ್. ವ್ಯಾಪ್ತಿಯ ಮೆಸ್ಕಾಂ ತ್ರೈಮಾಸಿಕ ಕಾಮಗಾರಿ ಅ.03 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಎಂ ಆರ್.ಎಸ್.220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 66 ಕೆವಿ ಡಿವಿಜಿ-1 ಬೇ ಯಲ್ಲಿ ಅ. 03 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಳೆಹೊನ್ನೂರು ವಿ ವಿ ಕೇಂದ್ರ, ಹೊಳಲೂರು ವಿ ವಿ ಕೇಂದ್ರ ಮತ್ತು ತಾವರೆಚಟ್ನಹಳ್ಳಿ ವಿ ವಿ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.

