ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 9,000 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ ಶಿಫಾರಸ್ಸನ್ನು ಪಾಲಿಸುವಂತೆ CWMA ಆದೇಶ ಹೊರಡಿಸಿದೆ.
ಇಂದು ನಡೆದ ನಹತ್ವದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿದ್ದು, ತಮಿಳುನಾಡಿಗೆ ಪ್ರತಿದಿನ ನೀರು ಹರಿಸುವಂತೆ ಆದೇಶಿಸಿದೆ. ಆಗಸ್ಟ್ 25ರ ಬೆಳಗ್ಗೆ 8 ಗಂಟೆಯಿಂದ ಈ ನಿರ್ದೇಶನ ಜಾರಿಗೆ ಬರಲಿದ್ದು, ಪ್ರತಿದಿನ 9,000 ಕ್ಯೂಸೆಕ್ ನೀರಿನ ಹರಿವು ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
15 ದಿನಗಳ ಅವಧಿಯಲ್ಲಿ ಒಟ್ಟು ಸುಮಾರು 11.66 ಟಿಎಂಸಿ ನೀರು ತಮಿಳುನಾಡಿಗೆ ಹರಿಯುವ ಸಾಧ್ಯತೆ ಇದೆ. ಈ ಹಿಂದೆ ಆಗಸ್ಟ್ 12ರಿಂದ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ CWRC ಸೂಚಿಸಿತ್ತು ಮತ್ತು CWMA ಕೂಡ ಅದನ್ನು ಎತ್ತಿಹಿಡಿದಿತ್ತು.
ಇದರಿಂದ ಕರ್ನಾಟಕದಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮಳೆ, ಜಲಾಶಯಗಳ ಒಳಹರಿವು ಹಾಗೂ ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಗಣಿಸಿ ನೀರು ಬಿಡುವ ಪ್ರಮಾಣವನ್ನು ಮರುಪರಿಶೀಲಿಸಬೇಕು ಎಂಬುದು ಕರ್ನಾಟಕದ ವಾದವಾಗಿದೆ.

