ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆ.ಎಸ್.ಆರ್.ಟಿ.ಸಿ.) ಅಕ್ಟೋಬರ್ 30 ರಿಂದ ನವೆಂಬರ್ 10ರವರೆಗೆ ಹಾಸನಾಂಬ ಪ್ಯಾಕೇಜ್ ಟೂರ್ ಆಯೋಜಿಸಿದೆ.
ಐರಾವತ ವೋಲ್ವೋ ಬಸ್, ಅಶ್ವಮೇಧ ಮತ್ತು ಕರ್ನಾಟಕ ಸಾರಿಗೆ ಬಸ್ ಗಳನ್ನು ಹಾಸನಾಂಬ ಪ್ಯಾಕೇಜ್ ಟೂರ್ ಗೆ ನಿಯೋಜಿಸಲಾಗಿದೆ. ಐರಾವತ ಬಸ್ ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಟು ಹಾಸನಾಂಬ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ ದರ್ಶನ ಬಳಿಕ ಸಂಜೆ 7 ಗಂಟೆಗೆ ಬೆಂಗಳೂರಿಗೆ ವಾಪಸ್ ಬರಲಿದೆ. ಹಾಸನಂಬ ದರ್ಶನದ 1000 ರೂ. ಟಿಕೆಟ್ ಮೊತ್ತ ಸೇರಿ 2500 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. ಮಕ್ಕಳಿಗೆ ಪ್ರತ್ಯೇಕ ದರ ಇದ್ದು, ಊಟ, ಪ್ರವೇಶ ಶುಲ್ಕ ಪ್ರತ್ಯೇಕ ಇರುತ್ತದೆ.
ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ಐರಾವತ ಬಸ್ ಹಾಸನಾಂಬ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ದರ್ಶನದ ನಂತರ ಮೈಸೂರಿಗೆ ಮರಳಲಿದೆ. ದರ್ಶನದ ಟಿಕೆಟ್ ಮೊತ್ತ ಸೇರಿ ಒಟ್ಟು 2,000 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.
ಅಶ್ವಮೇಧ ಬಸ್ ಗಳಲ್ಲಿ ಕ್ರಮವಾಗಿ 2000 ರೂ. ಮತ್ತು 1600 ರೂ. ದರ ನಿಗದಿ ಪಡಿಸಲಾಗಿದೆ. ಹಾಸನದ ಬಸ್ ನಿಲ್ದಾಣದಲ್ಲಿಯೂ ಹಾಸನಾಂಬ ಸೇರಿದಂತೆ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಜ್ ಟೂರ್ ಗೆ ಕರ್ನಾಟಕ ಸಾರಿಗೆ ಬಸ್ ಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದು, ದರ್ಶನದ ಟಿಕೆಟ್ ಸೇರಿ ಒಟ್ಟು 1,400 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.
ಶ್ರೀ ಹಾಸನಾಂಬ ದೇವಿ ದರ್ಶನಕ್ಕೆ ಭಕ್ತಾದಿಗಳು ಆಗಮಿಸಲು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ
ಹಾಸನ: ಶ್ರೀ ಹಾಸನಾಂಬ ದೇವಿ ದರ್ಶನಕ್ಕೆ ಭಕ್ತಾದಿಗಳು ಆಗಮಿಸಲು ಅನುಕೂಲವಾಗುವಂತೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ತಿಳಿಸಿದ್ದಾರೆ.
ಬೆಂಗಳೂರು ಹಾಸನ್ ಎಕ್ಸ್ ಪ್ರೆಸ್ ವಿಶೇಷ ರೈಲು ಬೆಂಗಳೂರಿನಿಂದ ಬೆಳಗ್ಗೆ 7.30 ಹೊರಟು ಹಾಸನಕ್ಕೆ ಬೆಳಗ್ಗೆ 11.30 ತಲುಪಲಿದೆ, ನಂತರ ಮಧ್ಯಾಹ್ನ 3 .15ಕ್ಕೆ ಹಾಸನದಿಂದ ಹೊರಟು ಸಂಜೆ 7.00 ಗಂಟೆ ತಲುಪಲಿದೆ. ಈ ರೈಲು ಮಾರ್ಗ ಮಧ್ಯ ಯಶವಂತಪುರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿಜಿನಗರ. ಶ್ರವಣಬೆಳಗೂಳ, ಚನ್ನರಾಯಪಟ್ಟಣ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುತ್ತದೆ ಎಂದರು.
ಅರಸೀಕೆರೆಯಿಂದ ಬೆಳಗ್ಗೆ 11.30 ಹೊರಟು ಹಾಸನಕ್ಕೆ 12.30 ತಲುಪಲಿದೆ, ಹಬ್ಬನಘಟ್ಟ ಹಾಗೂ ಬಾಗೇಶಪುರ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಅವಕಾಶವಿರುತ್ತದೆ ನಂತರ ಹಾಸನದಿಂದ 12.45 ಹೊರಟು ಮಧ್ಯಾಹ್ನ 2 ಗಂಟೆಗೆ ಅರಸೀಕೆರೆ ತಲುಪಲಿದೆ ಎಂದರು.
ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಬೆಂಗಳೂರು,ಅರಸೀಕೆರೆ ಹಾಗೂ ಮಾರ್ಗ ಮಧ್ಯದ ವಿವಿಧ ಪ್ರದೇಶಗಳಿಂದ ಹಾಸನಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದ ಅವರು ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ನೈರುತ್ಯ ರೈಲ್ವೆಯ ಅಧಿಕೃತ ಮೂಲಗಳಿಂದ ರೈಲುಗಳ ವೇಳಾ ಪಟ್ಟಿ ಹಾಗೂ ಸಂಚಾರದ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿದರು.
ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಶೌಚಾಲಯಗಳು ಸ್ವಚ್ಚವಾಗಿರಬೇಕು, ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ರೈಲ್ವೆ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್, ಭಕ್ತಾದಿಗಳು ದೇವಿ ದರ್ಶನಕ್ಕೆ ರೂ.300, 1000 ರೂಗಳ ಟಿಕೆಟ್ ಪಡೆಯಲು ಪ್ರತ್ಯೇಕ ಕೌಂಟರ್ ಇರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉಚಿತ ವೈಫೈ ವ್ಯವಸ್ಥೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹೆಚ್ಚಿನ ಜನಸಂದಣಿಯಿAದ ಇಂಟರ್ನೆಟ್ ಸಮಸ್ಯೆ ಎದುರಾಗುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಸದರ ಅನುದಾನದಲ್ಲಿ ಉಚಿತ ವೈಫೈ ಸೌಲಭ್ಯವನ್ನು ಅ.29 ರಿಂದ ನ.11 ರವರೆಗೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ರೈಲ್ವೆ ಇಲಾಖೆ ಅಸಿಸ್ಟೆಂಟ್ ಮ್ಯಾನೇಜರ್ ರಮೇಶ್, ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

