ಬೆಂಗಳೂರು: ರಾಜಧಾನಿಯ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ‘ಬಸವ ಭವನ’ದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿಗೆ ಗುರುವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಬಂದಿದೆ. ಅನಾಮಧೇಯ ಇ-ಮೇಲ್ ಮೂಲಕ ಬಂದ ಈ ಸಂದೇಶವು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಅನಾಮಧೇಯ ವ್ಯಕ್ತಿಯೊಬ್ಬ ಕಳುಹಿಸಿರುವ ಇ-ಮೇಲ್‌ನಲ್ಲಿ, “ಒಂದು ಗಂಟೆಯ ಒಳಗೆ ಕಚೇರಿಯಲ್ಲಿ 14 ಸೈನೈಡ್ ಬಾಂಬ್‌ಗಳು ಸ್ಫೋಟಗೊಳ್ಳಲಿವೆ” ಎಂದು ಬೆದರಿಕೆ ಹಾಕಲಾಗಿದೆ. ಈ ಆಘಾತಕಾರಿ ಸಂದೇಶವನ್ನು ಗಮನಿಸಿದ ಆಯೋಗದ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.
ಪೊಲೀಸ್ ಕಾರ್ಯಾಚರಣೆ : ಬೆದರಿಕೆ ಬಂದ ಬೆನ್ನಲ್ಲೇ ಆಯೋಗದ ಅಧಿಕಾರಿಗಳು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ಪತ್ತೆ ದಳ (BDDS), ಶ್ವಾನ ದಳದೊಂದಿಗೆ ಬಸವ ಭವನವನ್ನು ಸಂಪೂರ್ಣವಾಗಿ ತಪಾಸಣೆ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಡದಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ತಕ್ಷಣವೇ ಹೊರಕ್ಕೆ ಕಳುಹಿಸಿ, ಪ್ರದೇಶವನ್ನು ನಿರ್ಬಂಧಿಸಲಾಗಿದೆ.
ಸದ್ಯಕ್ಕೆ ಪೊಲೀಸರು ಇ-ಮೇಲ್ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದು, ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಬೇರೆನಾದರೂ ಉದ್ದೇಶವಿದೆಯೇ ಎಂಬ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

