ನವದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಕರೆ ನೀಡಿದ್ದ ‘ಚಲೋ ಸಂಸತ್’ ಪ್ರತಿಭಟನಾ ಮೆರವಣಿಗೆಯ ಮುನ್ನ ದೆಹಲಿಯ ಜಂತರ್ ಮಂತರ್ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದ್ದಾರೆ.
ಸಂಸತ್ ಭವನ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ಅಡಿಯಲ್ಲಿ ನವದೆಹಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಂತರ್ ಮಂತರ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿಜೆಪಿ ಕಾರ್ಯಕರ್ತರು ಸೇರಿದ್ದಾರೆ.
ಶಾಂತಿಯುತ ಮೆರವಣಿಗೆ ನಡೆಸೋಣ: ಸೋನಂ ವಾಂಗ್ಚುಕ್ ಪತ್ನಿ ಗೀತಾಂಜಲಿ ಅಂಗ್ಮೋ
ಸಂಸತ್ ಮೆರವಣಿಗೆಗೆ ಮುನ್ನ ಮಾತನಾಡಿದ ಸಮಾಜಸೇವಕ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಅಂಗ್ಮೋ, ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿರಬೇಕು ಎಂದು ಕರೆ ನೀಡಿದರು.”ಇಂದು ನಾವು ಶಾಂತಿಯುತ ಮೆರವಣಿಗೆಗೆ ಒತ್ತು ನೀಡಬೇಕು. ಶಿಕ್ಷಣದಂತಹ ಮಹತ್ವದ ವಿಷಯದ ಮೇಲೆ ನಮ್ಮ ಗಮನ ಕೇಂದ್ರೀಕರಿಸೋಣ. ನಮ್ಮ ಗುರಿಯಿಂದ ವಿಚಲಿತರಾಗಬೇಡಿ,” ಎಂದು ಅವರು ಹೇಳಿದ್ದಾರೆ.
ಪೊಲೀಸರಿಂದ ಲಘು ಲಾಠಿಚಾರ್ಜ್
ಸಂಸತ್ ಕಡೆಗೆ ಮೆರವಣಿಗೆ ಆರಂಭಿಸುವ ಮುನ್ನ ಜಂತರ್ ಮಂತರ್ನಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಲಾಠಿಚಾರ್ಜ್ ನಡೆಸಿದರು.ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಮಾತನಾಡಿ,”ಸೋನಂಜಿ ಆರೋಗ್ಯ ಸ್ಥಿರವಾಗಿದೆ. ಅವರು ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ದೇಶದ ಯುವ ಪ್ರತಿಭಟನಾಕಾರರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಕಳುಹಿಸಿದ್ದಾರೆ. ಕಳೆದ 30 ದಿನಗಳಿಂದ ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಮುಂದೆಯೂ ಶಾಂತಿಯುತವಾಗಿ ಸಂಸತ್ ಮೆರವಣಿಗೆ ನಡೆಯಲಿದೆ,” ಎಂದು ತಿಳಿಸಿದ್ದಾರೆ.
ಜಿರಳೆಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ’ : ಸಿಜೆಪಿ
ಸಿಜೆಪಿ ತನ್ನ ಬೆಂಬಲಿಗರು ಜಂತರ್ ಮಂತರ್ನಲ್ಲಿ ಸೇರುತ್ತಿರುವ ವಿಡಿಯೊವನ್ನು X ನಲ್ಲಿ ಹಂಚಿಕೊಂಡು,”ಭಾರಿ ಮಳೆ ಮತ್ತು ಕಠಿಣ ಭದ್ರತೆ ಇದ್ದರೂ ಇಂದು ಜಿರಳೆಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ!” ಎಂದು ಪೋಸ್ಟ್ ಮಾಡಿದೆ.ಸಿಜೆಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ದೆಹಲಿ ಮೆಟ್ರೋ ರೈಲು ನಿಗಮ (DMRC) ಐದು ಮೆಟ್ರೋ ನಿಲ್ದಾಣಗಳನ್ನು ಮುಂದಿನ ಸೂಚನೆವರೆಗೆ ಮುಚ್ಚಿದೆ. DMRC ತನ್ನ X ಪೋಸ್ಟ್ನಲ್ಲಿ, “ಭದ್ರತಾ ಕಾರಣಗಳಿಂದ ಮೇಲ್ಕಂಡ ಮೆಟ್ರೋ ನಿಲ್ದಾಣಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ” ಎಂದು ತಿಳಿಸಿದೆ.
https://twitter.com/ANI/status/2079066807307235577/video/1
https://twitter.com/ANI/status/2079070183738785987/video/1

