HomeKarnatakaBIG NEWS: ಪಡಿತರ ಪಡೆಯುತ್ತಿರುವ ಅನರ್ಹರ ವಿರುದ್ಧ ಕಾನೂನು ಕ್ರಮ: 13.51 ಕೋಟಿ ರೂ. ದಂಡ

BIG NEWS: ಪಡಿತರ ಪಡೆಯುತ್ತಿರುವ ಅನರ್ಹರ ವಿರುದ್ಧ ಕಾನೂನು ಕ್ರಮ: 13.51 ಕೋಟಿ ರೂ. ದಂಡ

ಬೆಳಗಾವಿ: ಅಕ್ರಮ ಪಡಿತರ ವಿರುದ್ಧ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿ, ರಾಜ್ಯಾದ್ಯಂತ ಜನವರಿ – 2021 ರಿಂದ ಮೇ 2023ರ ಅವಧಿಯಲ್ಲಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದ್ದು, ಇವರಿಗೆ 13.51 ಕೋಟಿ ರೂ. ದಂಡ ವಿಧಿಸಿ, ಅನರ್ಹರಿಗೆ ನೀಡಿದ ಸವಲತ್ತುಗಳಿಂದ ಉಂಟಾದ ನಷ್ಟವನ್ನು ಭರಿಸಲು ಸರ್ಕಾರ ಕ್ರಮವಹಿಸಿದೆ ಎಂದರು.

ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸುವ ಪಡಿತರ ಅಕ್ರಮ ಸಾಗಣೆ ಕಂಡುಬಂದಲ್ಲಿ ಕೂಡಲೇ ದಾಳಿ ನಡೆಸಿ, ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪ್ರಕರಣ ದಾಖಲಿಸಿ, ಅಕ್ರಮ ಪಡಿತರ ದಾಸ್ತಾನು ಮುಟ್ಟುಗೋಲು ಹಾಕಿಕೊಂಡು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮುಟ್ಟುಗೋಲು ದಾಸ್ತಾನನ್ನು ವಿಲೇ ಮಾಡಿ, ವಿಲೇ ಪಡಿಸಿದ ಪಡಿತರ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯಾದ್ಯಂತ 2024-25ನೇ ಸಾಲಿನಲ್ಲಿ 213 ಎಫ್‌ಐಆರ್ ದಾಖಲಿಸಿ ಒಟ್ಟು 2,68,07,872 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 238 ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಈ ಕುರಿತು ಪರಿಶೀಲಿಸಲು ಮೇಲ್ವಿಚಾರಣೆ ಮಾಡಲು ಇಲಾಖಾ ವತಿಯಿಂದ ನೋಡಲ್ ಅಧಿಕಾರಿಗಳನ್ನು ವಿಭಾಗವಾರು ನೇಮಕ ಮಾಡಲಾಗಿದೆ ಎಂದರು.

ಈ ಹಿಂದೆ ಕೆಲವು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದ ಫಲಾನುಭವಿಗಳು ಹಾಲಿ ಬಡತನ ರೇಖೆಗಿಂತ ಮೇಲೆ ಬಂದಿದ್ದು, ಸದರಿ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ಅಥವಾ ಸಿಎಸ್‌ಟಿ ಪಾವತಿದಾರರ ವಿವರಗಳನ್ನು ಕುಟುಂಬ ತಂತ್ರಾಂಶದಿಂದ ಪಡೆದು ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಆಹಾರ ಇಲಾಖೆಯಲ್ಲಿ ಬಳಸುವ ಸರ್ವರ್ ಹಳೆಯದಾಗಿದೆ. ಈ ಕಾರಣದಿಂದಾಗಿ ಎನ್‌ಐಸಿಯಿಂದ ಕೆಎಸ್‌ಡಿಸಿ ಗೆ ಆಹಾರ ತಂತ್ರಾಂಶದ ಮೈಗ್ರೇಶನ್ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಕಾರ್ಯ ಪೂರ್ಣವಾದ ನಂತರ ಆದ್ಯತಾ ಪಡಿತರ ಚೀಟಿ ನೀಡುವ ಕಾರ್ಯ ಹಾಗೂ ಪಡಿತರ ತಿದ್ದುಪಡಿ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular