ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್, ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಬಿಎ ಆಯುಕ್ತರು ಸೇರಿದಂತೆ ಪ್ರಮುಖ ಅಧಿಕಾರಿಗಳ ವಿರುದ್ಧ ಸುಮೋಟೋ (ಸ್ವಯಂಪ್ರೇರಿತ) ಕೇಸ್ ದಾಖಲಿಸಲು ನಿರ್ಧರಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಅಮಾಯಕರು ಬಲಿಯಾಗಿದ್ದಾರೆ. ಇದನ್ನು ಲೋಕಾಯುಕ್ತ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಕಿಡಿಕಾರಿದರು.
ಕಾಂಪೌಂಡ್‌ನ ಅಡಿಪಾಯ ಅತ್ಯಂತ ದುರ್ಬಲವಾಗಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ. ನಗರದಲ್ಲಿ ಪ್ರತಿ ವರ್ಷ ಮಳೆ ಬರುತ್ತದೆ ಎಂಬುದು ಗೊತ್ತಿದ್ದರೂ, ಇಂತಹ ದುರ್ಬಲ ಗೋಡೆಗಳ ಪಕ್ಕದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಿರುವುದು ಅಧಿಕಾರಿಗಳ ಬೇಜವಾಬ್ದಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಒಂದು ಗಂಟೆ ಮಳೆ ಬಂದಿದ್ದಕ್ಕೇ ಗೋಡೆ ಕುಸಿಯುತ್ತಿದೆ ಎಂದರೆ ಕಾಮಗಾರಿಯ ಗುಣಮಟ್ಟ ಎಷ್ಟಿರಬಹುದು ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಕೇವಲ ಕೆಳಹಂತದ ಸಿಬ್ಬಂದಿಯನ್ನಷ್ಟೇ ಅಲ್ಲದೆ, ಉನ್ನತ ಮಟ್ಟದ ಅಧಿಕಾರಿಗಳನ್ನೂ ಹೊಣೆಗಾರರನ್ನಾಗಿ ಮಾಡಲಾಗುವುದು.ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಲಾಗುವುದು ಹೇಳಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ, ಅಪರ ಕಾರ್ಯದರ್ಶಿ, 5 ಪಾಲಿಕೆಗಳ ವಲಯ ಆಯುಕ್ತರು – ಇವರೆಲ್ಲರನ್ನೂ ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದರು. ಬೌರಿಂಗ್ ಆಸ್ಪತ್ರೆ ಆವರಣದ ಇನ್ಚಾರ್ಜ್ ಹರೀಶ್ ಕುಮಾರ್ನನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಲು ಲೋಕಾಯುಕ್ತರು ಸೂಚಿಸಿದ್ದಾರೆ.
ಏಪ್ರಿಲ್ 29ರಸಂಜೆ ಬೆಂಗಳೂರಿನಲ್ಲಿ ಸುರಿದ ಬಿರುಗಾಳಿ ಆಲಿಕಲ್ಲು ಮಳೆಗೆ ರಕ್ಷಣೆ ಪಡೆಯಲು ಪಾದಚಾರಿಗಳು ಮತ್ತು ವ್ಯಾಪಾರಿಗಳು ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯ ಬಳಿ ನಿಂತಿದ್ದರು. ಮಳೆಯ ತೀವ್ರತೆಗೆ ಸುಮಾರು 100 ಅಡಿ ಉದ್ದದ ಗೋಡೆ ಏಕಾಏಕಿ ಕುಸಿದುಬಿದ್ದಿತ್ತು.ಅವಶೇಷಗಳಡಿ ಸಿಲುಕಿ ಇಬ್ಬರು ಮಹಿಳೆಯರು, ಪುಟ್ಟ ಮಗು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

