ಬೆಂಗಳೂರು: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಜನ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿದ್ದ ಚೆನ್ನೈ ಮೂಲದ ಎಎಸ್ಆರ್ ಟ್ರೇಡರ್ಸ್ ಕಂಪನಿ ವಿರುದ್ಧ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಲ್ಲದೇ ಹೆಚ್ಚುವರಿ ತ್ಯಾಜ್ಯ ಕಾಂಪೌಂಡ್ ಪಕ್ಕದಲ್ಲಿದ್ದು, ಅದರ ಭಾರಕ್ಕೆ ಗೋಡೆ ಬಿದ್ದಿದೆ ಎಂಬ ಸ್ಫೋಟಕ ವಿಚಾರ ಬಹಿರಂಗವಾಗಿದೆ. ಚೆನ್ನೈ ಮೂಲದ ಎಎಸ್ಆರ್ ಟ್ರೇಡರ್ಸ್ ಕಂಪನಿ ಬೌರಿಂಗ್ ಮತ್ತು ಲೇಡಿ ಕರ್ಝನ್ ಮೆಡಿಕಲ್ ಕಾಲೇಜ್ನಿರ್ಮಾಣದ ಗುತ್ತಿಗೆ ಪಡೆದಿತ್ತು. ನೆಲಸಮ ಮಾಡಿದ್ದ ಕಟ್ಟಡದ ಅವಶೇಷ ಹಾಗೂ ಹೆಚ್ಚುವರಿ ತ್ಯಾಜ್ಯಗಳನ್ನು ನಿಯಮಾನುಸಾರ ಸ್ಥಳದಿಂದ ತೆರವುಗೊಳಿಸಿರಲಿಲ್ಲ. ಬದಲಿಗೆ, ಭಾರಿ ಪ್ರಮಾಣದ ತ್ಯಾಜ್ಯವನ್ನು ಕಾಂಪೌಂಡ್ ಪಕ್ಕದಲ್ಲೇ ರಾಶಿ ಹಾಕಲಾಗಿತ್ತು. ಹೀಗಾಗಿ ಭಾರ ತಡೆಯಲಾರದೆ ಗೋಡೆ ಕುಸಿದು ಬಿದ್ದಿದ್ದರಿಂದ ಏಳು ಜನರು ಸಾವನ್ನಪ್ಪಿದಾರೆ ಎಂದು ತಿಳಿದುಬಂದಿದೆ.
ತ್ಯಾಜ್ಯ ತೆರವುಗೊಳಿಸದ ಹಾಗೂ ನಿಯಮ ಉಲ್ಲಂಘಿಸಿದ ಕುರಿತು ಸ್ಪಷ್ಟೀಕರಣ ನೀಡುವಂತೆ ಸರ್ಕಾರದ ವತಿಯಿಂದ ಎಎಸ್ಆರ್ ಟ್ರೇಡರ್ಸ್ ಕಂಪನಿಯ ಇಮೇಲ್ ಐಡಿಗೆ ನೋಟಿಸ್ ಕಳುಹಿಸಲಾಗಿತ್ತು. ಮೇ 18ರ ಒಳಗಾಗಿ ಲಿಖಿತ ಸ್ಪಷ್ಟೀಕರಣ ನೀಡಬೇಕೆಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರು ಗಡುವು ನೀಡಿದ್ದರೂ ಗುತ್ತಿಗೆದಾರ ಕಂಪನಿಯು ಇಮೇಲ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರದ ನೋಟಿಸ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಇಂಜಿನಿಯರ್ ಚಂದ್ರು ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಏಪ್ರಿಲ್ 29ರಂದು ಭಾರಿ ಮಳೆಗೆ ಬೌರಿಂಗ್ ಆಸ್ಪತ್ರೆ ಕೌಂಪೌಂಡ್ ಕುಸಿದು ಬಿದ್ದು ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದ 7 ಜನರು ಸಾವನ್ನಪ್ಪಿದ್ದರು.

