ಬೆಂಗಳೂರು : ಕರ್ನಾಟಕದಾದ್ಯಂತ ಹಲವು ನ್ಯಾಯಾಲಯಗಳಿಗೆ ಕಿಡಿಗೇಡಿಗಳು ಅಧಿಕೃತ ಇ-ಮೇಲ್ ಐಡಿಗಳ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಹೌದು. ಧಾರವಾಡ, ದಾವಣಗೆರೆ ಹಾಗೂ ಮಡಿಕೇರಿ ಕೋರ್ಟ್ ಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಧಾರವಾಡ ಹೈಕೋರ್ಟ್ ಪೀಠ: ಧಾರವಾಡದ ಹೈಕೋರ್ಟ್ ಪೀಠಕ್ಕೆ ಆರ್‌ಡಿಎಕ್ಸ್ (RDX) ಮೂಲಕ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆ ಕಲಾಪ ಸ್ಥಗಿತಗೊಳಿಸಿ, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ ನಡೆಸಲಾಯಿತು.
ದಾವಣಗೆರೆ ಮತ್ತು ಮಡಿಕೇರಿ: ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೂ ಇಂತಹದ್ದೇ ಸಂದೇಶ ಬಂದಿತ್ತು. ಇನ್ನು ಮಡಿಕೇರಿ ಕೋರ್ಟ್‌ನಲ್ಲಿ ಬೆದರಿಕೆಯ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ವಕೀಲರು ಹೊರಬಂದಿದ್ದು, ಸುಮಾರು ಮಧ್ಯಾಹ್ನ 12:30ಕ್ಕೆ ಸ್ಫೋಟ ಸಂಭವಿಸಲಿದೆ ಎಂಬ ಆತಂಕಕಾರಿ ಸಂದೇಶದಿಂದ ಕಲಾಪಗಳು ಸ್ಥಗಿತಗೊಂಡವು. ಎಲ್ಲವೂ ತಮಿಳುನಾಡಿನ ಮೂಲದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಅಂತಿಮವಾಗಿ ಇವೆಲ್ಲವೂ ಹುಸಿ ಬಾಂಬ್ ಬೆದರಿಕೆ (Hoax) ಎಂದು ತಿಳಿದುಬಂದಿದೆ.
ಕರ್ನಾಟಕದ ಉಚ್ಚ ನ್ಯಾಯಾಲಯದ ಧಾರವಾಡ ಪೀಠ ಸೇರಿದಂತೆ ರಾಜ್ಯದ ಒಟ್ಟು ಐದು ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಜನವರಿ ಮೊದಲ ವಾರದಲ್ಲಿ ರಾಜ್ಯಾದ್ಯಂತ ತೀವ್ರ ಆತಂಕ ಸೃಷ್ಟಿಸಿತ್ತು. ಅದೇ ದಿನ ಬೆಂಗಳೂರಿನ ಕೋರಮಂಗಲದಲ್ಲಿರುವ ಪಾಸ್ಪೋರ್ಟ್ ಕಚೇರಿಗೂ ಸಹ ಇದೇ ರೀತಿಯ ಬೆದರಿಕೆ ಇ-ಮೇಲ್ ಬಂದಿತ್ತು.

