ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರು ನಗರದಲ್ಲಿ ಖಾಲಿ ಸೈಟು ಹೊಂದಿರುವ ಜನರಿಗೆ ಗುಡ್‌ನ್ಯೂಸ್ ನೀಡಿದೆ. ಬಿಡಿಎ ಖಾಲಿ ಸೈಟ್‌ಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು ಪರಿಷ್ಕರಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಬಿಡಿಎ ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ನಿಗದಿತ ಅವಧಿಯೊಳಗೆ (5 ವರ್ಷ) ಮನೆ ಅಥವ ಕಟ್ಟಡ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ನಿವೇಶನಗಳ ಮಾಲೀಕರಿಗೆ ಬಿಡಿಎ ದಂಡವನ್ನು ವಿಧಿಸುತ್ತದೆ.
ಬಿಡಿಎ ಮಾಲೀಕರಿಗೆ ವಿಧಿಸುತ್ತಿದ್ದ ಶೇ 10ರಷ್ಟು ದಂಡ ಶುಲ್ಕವನ್ನು ಪರಿಷ್ಕರಣೆ ಮಾಡಿದೆ. ಶೇ 2.5 ರಿಂದ ಶೇ 10ರ ತನಕ ದಂಡ ಶುಲ್ಕವನ್ನು 4 ವಿಭಾಗವಾಗಿ ಮಾಡಲಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ಹೊರಡಿಸಿದ ಅಧಿಸೂಚನೆ ಅನ್ವಯ ಇಷ್ಟು ದಿನ ಶೇ 10ರಷ್ಟು ದಂಡವನ್ನು ವಿಧಿಸಲಾಗುತ್ತಿತ್ತು.
ಆದರೆ ಬಿಡಿಎ ಜನಸಂಪರ್ಕ ಸಭೆಯಲ್ಲಿ ಈ ದಂಡ ಮೊತ್ತದ ಕುರಿತು ಭಾರೀ ವಿರೋಧ ವ್ಯಕ್ತವಾಗಿತ್ತು. ದಂಡವನ್ನು ಪರಿಷ್ಕರಣೆ ಮಾಡಬೇಕು ಎಂದು ಜನರು ಬೇಡಿಕೆ ಇಟ್ಟಿದ್ದರು. ಆದ್ದರಿಂದ ಬಿಡಿಎ ಈಗ ದಂಡ ಮೊತ್ತ ಪರಿಷ್ಕರಣೆ ಮಾಡಿದೆ.
ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಪರಿಷ್ಕರಣೆ ಮಾಡಲಾಗಿದೆ. ಆದರೆ ನಾಡಪ್ರಭು ಕೆಂಪೇಗೌಡ ಬಡಾವಣೆ, ಡಾ.ಶಿವರಾಮ ಕಾರಂತ ಬಡಾವಣೆಗಳಿಗೆ ಈ ದಂಡ ಮೊತ್ತ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ದಂಡ ಮೊತ್ತದ ವಿವರ
- 20*30 ನಿವೇಶನ (0 ಇಂದ 600 ಚ. ಅಡಿ) – ಶೇ 2.5ರಷ್ಟು ದಂಡ
- 30*40 ನಿವೇಶನ (601 ರಿಂದ 1200) – ಶೇ 5ರಷ್ಟು ದಂಡ
- 40*60 ನಿವೇಶನ (1201 ರಿಂದ 2400) – ಶೇ 7.5ರಷ್ಟು ದಂಡ
- 40*60 ಹಾಗೂ ಮೇಲ್ಪಟ್ಟ ನಿವೇಶನ (2401 ಮತ್ತು ಮೇಲ್ಪಟ್ಟು) – ಶೇ 10ರಷ್ಟು ದಂಡ
ಬಿಡಿಎನಿಂದ ನೋಂದಾಯಿಸಲಾದ ಗುತ್ತಿಗೆ ಮತ್ತು ಮಾರಾಟ ಒಪ್ಪಂದ ಪತ್ರದ ಪ್ರಕಾರ ನಿಗದಿತ ಅವಧಿಯೊಳಗೆ ಕಟ್ಟಡ ನಿರ್ಮಿಸದೇ ನಂತರದ ಅವಧಿಯಲ್ಲಿ ಸೈಟುಗಳಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ ಪರಿಷ್ಕೃತ ದರದ ಅನ್ವಯ ದಂಡ ಪಾವತಿಸಬೇಕಾಗುತ್ತದೆ.
ಖಾಲಿ ನಿವೇಶನದ ದಂಡ ಪಾವತಿ ಮಾಡಲು ಇಚ್ಚಿಸದ ಜನರು ನಿವೇಶನಗಳನ್ನು ಪ್ರಾಧಿಕಾರಕ್ಕೆ ವಾಪಸ್ ಮಾಡಿ ಪಾವತಿಸಿದ ಮೊತ್ತದಲ್ಲಿ ಶೇ 12.5ರಷ್ಟು ಮೊತ್ತವನ್ನು ಹಿಂಪಡೆಯಲು ಸ್ವತಂತ್ರರಾಗಿರುತ್ತಾರೆ.
ದಂಡ ಪಾವತಿ ಮಾಡುವಂತೆ ತಿಳಿಸಿದ 90 ದಿನಗಳಲ್ಲಿ ಪಾವತಿ ಮಾಡದಿದ್ದಲ್ಲಿ ಶೇ 2ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಈಗಾಗಲೇ ಖಾಲಿ ನಿವೇಶನದ ದಂಡವನ್ನು ಪಾವತಿಸಿದ ಜನರಿಗೆ ಇದು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

