ಬೆಂಗಳೂರು : ಬೆಂಗಳೂರು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ತಡರಾತ್ರಿ ಟೇಕ್‌ಆಫ್‌ಗೆ ಸಿದ್ಧವಾಗಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇರುವುದಾಗಿ ಅನಾಮಧೇಯ ವ್ಯಕ್ತಿ ಬರೆದಿಟ್ಟಿದ್ದ ಪತ್ರ ಪತ್ತೆಯಾಯಿತು. ಮಾಹಿತಿ ತಿಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಬಾಂಬ್ ನಿಷ್ಕ್ರಿಯ ದಳ (BDS) ಮತ್ತು ಶ್ವಾನದಳ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು.
ಮುಂಜಾಗ್ರತಾ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ, ವಿಮಾನವನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಯಿತು. ಹಲವು ಗಂಟೆಗಳ ಕಾಲ ನಡೆದ ಪರಿಶೀಲನೆಯ ಬಳಿಕ ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದೇ, ಇದು ಹುಸಿ ಬಾಂಬ್ ಬೆದರಿಕೆ ಎಂದು ಅಧಿಕಾರಿಗಳು ದೃಢಪಡಿಸಿದರು.ಘಟನೆ ಹಿನ್ನೆಲೆಯಲ್ಲಿ ವಿಮಾನದ ಸಂಚಾರದಲ್ಲಿ ಕೆಲಕಾಲ ವಿಳಂಬ ಉಂಟಾಯಿತು. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ವಿಮಾನಕ್ಕೆ ತೆರಳಲು ಅನುಮತಿ ನೀಡಲಾಯಿತು. ಈ ಸಂಬಂಧ ಬಾಂಬ್ ಬೆದರಿಕೆ ಪತ್ರ ಬರೆದಿಟ್ಟಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

