ಬೆಂಗಳೂರು: ಬಸ್ ನಲ್ಲಿದ್ದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ಹಿಂತಿರುಗಿಸಿ ಬಿಎಂಟಿಸಿ ಸಿಬ್ಬಂದಿ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಬಸ್ ನಲ್ಲಿ ಮಹಿಳೆಯೊಬ್ಬರು ಬಿಟ್ಟು ಇಳಿದಿದ್ದರು. ಅದನ್ನು ಸುರಕ್ಷಿತವಾಗಿ ಮಾಲೀಕರಿಗೆ ತಲುಪಿಸಲಾಗಿದೆ. ಜನವರಿ 31ರಂದು ಕೆಆರ್ ಮಾರುಕಟ್ಟೆಯಿಂದ ಪದ್ಮನಾಭನಗರಕ್ಕೆ ಹೋಗುವ ಬಸ್ ನಲ್ಲಿ ಘಟನೆ ನಡೆದಿತ್ತು.
ಕೆಆರ್ ಮಾರ್ಕೆಟ್ ನಲ್ಲಿ ಬಸ್ ಹತ್ತಿದ ಮಹಿಳೆ ಬ್ಯಾಗ್ ಬಿಟ್ಟು ಬಸವನಗುಡಿಯಲ್ಲಿ ಇಳಿದಿದ್ದರು. ಆದರೆ, ಬಸ್ ನಲ್ಲಿ ರಶ್ ಇದ್ದ ಕಾರಣ ಸಿಬ್ಬಂದಿ ಕೂಡ ಗಮನಿಸಲಿಲ್ಲ. ನಂತರ ಮಹಿಳೆ ಬಿಎಂಟಿಸಿ ಸೆಂಟ್ರಲ್ ಆಫೀಸ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಟಿಕೆಟ್ ನಲ್ಲಿ ನಮೂದಿಸಿದ್ದ ಬಸ್ ನಂಬರ್ ಮೂಲಕ ಬಸ್ ಪತ್ತೆ ಮಾಡಲಾಗಿದೆ. ಬಸ್ ನಲ್ಲಿ ಹೋದಾಗ ಚಿನ್ನಾಭರಣ ಇದ್ದ ಬ್ಯಾಗ್ ಸಿಕ್ಕಿದೆ. ಬಿಎಂಟಿಸಿ ಸಿಬ್ಬಂದಿಗೆ ಮಹಿಳೆ ಧನ್ಯವಾದ ಹೇಳಿದ್ದಾರೆ. ಸಿಬ್ಬಂದಿ ಸಕಾಲಿಕ ಪ್ರಯತ್ನ, ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

