ಬೆಂಗಳೂರು ನಗರದಲ್ಲಿ ಮೂರು ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರವನ್ನು ನಡೆಸುತ್ತಿದೆ. ಹಳದಿ ಮಾರ್ಗಕ್ಕೆ 8ನೇ ರೈಲು ಸಹ ಸೇರ್ಪಡೆಯಾಗಿದೆ. ಹಾಗಾದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸೇವೆ ಯಾವಾಗ?.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್ ವಿಮಾನ ನಿಲ್ದಾಣದ ನಮ್ಮ ಮೆಟ್ರೋ ಮಾರ್ಗವನ್ನು ಪರಿಶೀಲನೆ ಮಾಡಿದರು. ಇದು ನಮ್ಮ ಮೆಟ್ರೋ ಹಂತ- 2ಬಿ ಮಾರ್ಗವಾಗಿದೆ.
ಡಾ. ಜೆ. ರವಿಶಂಕರ್ ಹಂತ- 2ಬಿ ನೀಲಿ ಮಾರ್ಗದಲ್ಲಿನ ಕಸ್ತೂರಿನಗರ-ಕೊಡಿಗೆಹಳ್ಳಿ ಕ್ರಾಸ್ ತನಕ ನಡೆಯುತ್ತಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು. ಕಾರ್ಯನಿರ್ವಾಹಕ ನಿರ್ದೇಶಕರು, ಹಿರಿಯ ಅಭಿಯಂತರರು ಹಾಗೂ ಸಂಬಂಧಿತ ಸಿವಿಲ್ ಗುತ್ತಿಗೆದಾರೊಂದಿಗೆ ಪ್ರಮುಖ ಸಿವಿಲ್ ಮತ್ತು ನಿಲ್ದಾಣದ ಕಾಮಗಾರಿಗಳ ಪ್ರಗತಿಯ ಕುರಿತು ಸಮಗ್ರವಾಗಿ ಚರ್ಚಿಸಿದರು.
ಹೊರ ವರ್ತುಲ ರಸ್ತೆ (ಒಆರ್‌ಆ) ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ ವಯಾಡಕ್ಟ್ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಅಗತ್ಯವನ್ನು ಅವರು ಹೇಳಿದರು. ಇತ್ತೀಚೆಗೆ ಗುತ್ತಿಗೆ ನೀಡಲಾದ ನಿಲ್ದಾಣಗಳ ವಾಸ್ತುಶಿಲ್ಪ ಹಾಗೂ ಇತರೆ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಭೇಟಿಯ ವೇಳೆ ವ್ಯವಸ್ಥಾಪಕ ನಿರ್ದೇಶಕರು ಸ್ಥಳದಲ್ಲಿದ್ದ ಅಭಿಯಂತರರು ಮತ್ತು ಗುತ್ತಿಗೆದಾರರೊಂದಿಗೆ ಚರ್ಚೆ ನಡೆಸಿ, ಕಾಮಗಾರಿಗಳ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಪರಿಹರಿಸಿ, ಸುರಕ್ಷತಾ ನಿಯಮಗಳು ಮತ್ತು ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದರು.
ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರೈಸಿ ಕಾರ್ಯಾಚರಣೆ ಸಾಧಿಸಲು ಹೆಚ್ಚುವರಿ ಮಾನವ ಸಂಪನ್ಮೂಲವನ್ನು ನಿಯೋಜಿಸಿ ಕಾಮಗಾರಿಯ ವೇಗವನ್ನು ಹೆಚ್ಚಿಸುವ ಅಗತ್ಯವನ್ನು ತಿಳಿಸಿದರು.
ನಮ್ಮ ಮೆಟ್ರೋ ಮಾರ್ಗ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಮಾರ್ಗವನ್ನು ನೀಲಿ ಮಾರ್ಗ ಎಂದು ಹೆಸರಿಸಲಾಗಿದೆ. ಒಟ್ಟು ಎರಡು ಹಂತದಲ್ಲಿ ಈ ಕಾಮಗಾರಿ ನಡೆಯುತ್ತಿದೆ.
ಹಂತ 2Aಯಲ್ಲಿ 19.75 ಕಿ.ಮೀ. ಉದ್ದದ ಮಾರ್ಗ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ವರೆಗೆ ನಿರ್ಮಾಣವಾಗುತ್ತಿದೆ. ಹಂತ 2B 38.44 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಕೆ.ಆರ್. ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಇರಲಿದೆ.
ಸಿಲ್ಕ್ ಬೋರ್ಡ್–ಕೆ.ಆರ್.ಪುರಂ ಮಾರ್ಗ 2026ರ ಅಂತ್ಯಕ್ಕೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗ 2027ಕ್ಕೆ ಪೂರ್ಣಗೊಳಿಸುವ ಗುರಿ ಇದೆ.

