ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರು ತನಿಖೆಯ ಬಳಿಕ ನಿರಪರಾಧಿ ಎಂದು ಸಾಬೀತಾದರೆ ಅವರನ್ನ ಮುಖ್ಯಮಂತ್ರಿಯಾಗಿ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇ.ಡಿ. ಚಾರ್ಜ್‍ಶೀಟ್‌ನಲ್ಲೂ ನಾಗೇಂದ್ರ ಹೆಸರು ಉಲ್ಲೇಖವಾಗಿದೆ. ಶಿವಮೊಗ್ಗದಲ್ಲಿ ಪ್ರಾಮಾಣಿಕ ಅಧಿಕಾರಿ, ಬೋವಿ ಸಮಾಜದ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಡೆತ್ ನೋಟಿನಲ್ಲೂ ಅಂದಿನ ಸಚಿವ ನಾಗೇಂದ್ರರ ಮೌಖಿಕ ಆದೇಶದ ಮೇರೆಗೆ ಹಣವನ್ನ ತೆಲಂಗಾಣ ರಾಜ್ಯಕ್ಕೆ ವರ್ಗಾಯಿಸಿದ್ದಾಗಿ ತಿಳಿಸಿದ್ದರು ಎಂದರು.
ಬಿಜೆಪಿ ಎತ್ತಿದ ಪ್ರಶ್ನೆ ಗಂಭೀರವಾಗಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ಸಿನವರು ಕೊಳ್ಳೆ ಹೊಡೆದಿದ್ದಾರೆ. ಯಾವುದೇ ಕಾರಣಕ್ಕೂ ಇಂಥ ಭ್ರಷ್ಟರನ್ನು ಮುಂದುವರೆಸಬಾರದು ಎಂದು ಆಗ್ರಹಿಸಿದರು. ಸಚಿವ ಸ್ಥಾನದಿಂದ ತಕ್ಷಣ ಅವರನ್ನು ಕೈಬಿಡಿ ಎಂದು ಒತ್ತಾಯಿಸಿದರು.
ಅಧಿವೇಶನ ಆರಂಭಕ್ಕೂ ಮೊದಲೇ ಇದನ್ನು ಹೇಳಿದ್ದೇವೆ. ಉತ್ತರ ಕರ್ನಾಟಕದ ಸಮಸ್ಯೆಗಳು, ಬರಗಾಲ, ನೀರಾವರಿ ಯೋಜನೆಗಳು, ಕೆಪಿಎಸ್ಸಿ ಹಗರಣದ ಕುರಿತು ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ. ನಾಗೇಂದ್ರರ ರಾಜೀನಾಮೆ ಪಡೆಯಿರಿ ಎಂದು ಒತ್ತಾಯಿಸಿದರೆ ಅವರು ಭಂಡತನದಿಂದ ಮೆರೆಯುತ್ತಿದ್ದಾರೆ. ಅಧಿಕಾರದ ಮದದಿಂದ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ. ಈ ಮದವನ್ನು ಇಳಿಸುವ ಶಕ್ತಿ ಬಿಜೆಪಿಗೆ ಇದೆ ಎಂದು ಎಚ್ಚರಿಸಿದರು.
ನಮ್ಮ ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳದಿರಿ. ಸದನದಲ್ಲಿ ಹೋರಾಟ ಮಾಡುತ್ತಿದ್ದರೆ ನಮಗೆ ಗೂಂಡಾಗಳೆಂದು ಹೇಳಿದ್ದಾರೆ. ದಲಿತರ ಪರವಾಗಿ ಧ್ವನಿ ಎತ್ತಿದ ಬಿಜೆಪಿ- ಜೆಡಿಎಸ್‍ನವರನ್ನು ಗೂಂಡಾಗಳೆಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು. 187 ಕೋಟಿ ಹಣ ಲೂಟಿ ಆಗಿದೆ. ದಲಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆ ಹಣ ವಾಪಸ್ ಬರಬೇಕು. ಆ ಸಮುದಾಯದ ಅಭಿವೃದ್ಧಿಗೆ ಹಣ ಬಳಕೆ ಆಗಬೇಕು ಎಂದು ತಿಳಿಸಿದರು. ಎಲ್ಲಿವರೆಗೆ ಬೇಕೋ ಅಲ್ಲಿಯವರೆಗೆ ಹೋರಾಟಕ್ಕೆ ಸಿದ್ಧ ಎಂದರು.
ಸಚಿವ ನಾಗೇಂದ್ರ ಬಹಳ ಸಣ್ಣ ಮೀನು ಮಾತ್ರ. ಬಹಳ ದೊಡ್ಡ ಮೀನುಗಳು, ತಿಮಿಂಗಿಲಗಳು ಇದರ ಹಿಂದಿವೆ. ಇವರೆಲ್ಲರನ್ನೂ ಹೇಗೆ ಬೀದಿಗೆ ತರಬೇಕು? ಹೇಗೆ ಹೋರಾಟ ಮಾಡಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಸಿದ್ಧವಾಗಿದೆ. ಧ್ವನಿ ಇಲ್ಲದ ದಲಿತರ ಪರವಾಗಿ ಎಲ್ಲಿಯವರೆಗೂ ಅಗತ್ಯವೋ ಅಲ್ಲಿನವರೆಗೆ ಹೋರಾಟ ಮಾಡಲಿದ್ದೇವೆ. ಆ ಸಮುದಾಯಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಿಜೆಪಿ ಕಟಿಬದ್ಧವಾಗಿದೆ ಎಂದು ಹೇಳಿದರು.
ನಮ್ಮ ಉದ್ದೇಶ ನಾಗೇಂದ್ರರ ತೇಜೋವಧೆ ಮಾಡುವುದಲ್ಲ. ದಲಿತ ಸಮುದಾಯಕ್ಕೆ ನ್ಯಾಯ ಕೊಡಿಸುವುದು. ನಾಗೇಂದ್ರರು ರಾಜೀನಾಮೆ ಕೊಡುವ ವರೆಗೆ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

