ಬೆಂಗಳೂರು: ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿಯವರು ಸಮಾಜ ಘಾತುಕ ಶಕ್ತಿಗಳ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಪೋಲೀಸರಿಗೆ ಸೂಚಿಸಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಗಣೇಶೋತ್ಸವ ಆಚರಣೆಗೆ ಸರ್ಕಾರ ಅನೇಕ ನಿರ್ಬಂಧ ಹೇರಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆ ಬಗ್ಗೆ, ಅವರು ಈ ವಿಚಾರದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ. ಗಣೇಶ ಹಬ್ಬವನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಬೇಕು. ಮೆರವಣಿಗೆ ಹೋಗುವಾಗ ಶಿಸ್ತು ಪಾಲನೆ ಆಗಬೇಕು, ವಿದ್ಯುತ್ ಕಂಬ, ತಂತಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಬಿಜೆಪಿಯವರು ಏನಾದರೂ ಮಾಡಲಿ. ಗಣೇಶ ಬಿಜೆಪಿಯವರ ಆಸ್ತಿಯಲ್ಲ. ಬಾಲಗಂಗಾಧರ ತಿಲಕರು ಆರಂಭಿಸಿದ ಆಚರಣೆ ನಡೆದುಕೊಂಡು ಬರುತ್ತಿದೆ. ನಾವು ಹಬ್ಬಕ್ಕೆ ರಜೆ ನೀಡಿ, ಹಬ್ಬ ಆಚರಣೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.
ಆರ್.ಅಶೋಕ್ ಅವರು ಮೈಸೂರಿನ ಟಿ ನರಸೀಪುರ ಪೊಲೀಸ್ ಠಾಣೆಗೆ ಹೋಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ವಿಚಾರವಾಗಿ, ಅವರು ಎಲ್ಲಿಗಾದರೂ ಹೋಗಲಿ. ಏನಾದರೂ ಮಾಡಲಿ. ಸುಳ್ಳೇ ಬಿಜೆಪಿಯವರ ಮನೆ ದೇವರು. ಪೊಲೀಸ್ ಠಾಣೆಗೆ ಯಾಕೆ ಹೋಗುತ್ತಿದ್ದಾರೆ? ಇಲ್ಲದ ವಿಚಾರ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಗೃಹ ಸಚಿವರಾಗಿದ್ದವರು. ಅವರ ಪರಿಮಿತಿ ಏನು ಎಂದು ಅರಿವಿರಲಿ ಎಂದು ತಿರುಗೇಟು ನೀಡಿದರು.
ನಾವು ಬಿಜೆಪಿಯವರ ಸಭೆಗಳಿಗೆ ನಿಯಂತ್ರಣ ಹಾಕುವುದಿಲ್ಲ. ಅವರು ಕಾನೂನು ಚೌಕಟ್ಟಿನಲ್ಲಿ ಎಲ್ಲಿ ಬೇಕಾದರೂ ತಮ್ಮ ರಾಜಕೀಯ ಸಭೆ ಮಾಡಬಹುದು. ಬಿಜೆಪಿ ಅಧ್ಯಕ್ಷರು ಅನಗತ್ಯವಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಅವರು ಏನಾದರೂ ಮಾಡಬಹುದು, ಏನಾದರೂ ಹೇಳಬಹುದು ಎಂದರು.
ಅವರು ಯಾವ ಮೈದಾನದಲ್ಲಿ ಕಾರ್ಯಕ್ರಮ ಮಾಡಿದರೂ ಅವರಿಗೆ ಅನುಮತಿ ನೀಡಿ ಎಂದು ನಾನೇ ಹೇಳಿರುವೆ. ಅಧಿಕಾರ ದುರುಪಯೋಗ ಮಾಡಿಕೊಂಡು ಯಾರಿಗೂ ನಿರ್ಬಂಧ ಹೇರುವುದಿಲ್ಲ. ಅದು ನಮ್ಮ ಕಾರ್ಯವೈಖರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಟಿ.ನರಸೀಪುರ ಇನ್ಸ್ ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿಗೆ ಕರೆ ನೀಡಿದ ಮಾಜಿ ಸಂಸದ ಪ್ರತಾಪ್ ಸಿಂಹ
ಮೈಸೂರು: ಮಸೀದಿ ರಸ್ತೆಯಲ್ಲಿ ಗಣೇಶ ಮೆರವಣಿಗೆ ಸಾಗುವಂತಿಲ್ಲ ಎಂಬ ಹೇಳಿಕೆ ನೀಡಿದ್ದ ಟಿ.ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಅಮಾನತಿಗೆ ರಾಜ್ಯ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಟಿ.ನರಸೀಪುರದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಟಿ.ನರಸೀಪುರ ಪೊಲೀಸ್ ಠಾಣೆ ಎದುರು ಬಿಜೆಪಿ ನಾಯಕರು ಕೈಯಲ್ಲಿ ಗಣೇಶ ಮೂರ್ತಿ ಹಿಡಿದು ಪ್ರತಿಭಟನೆ ನಡೆಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾ ನಿರತ ಬಿಜೆಪಿ ನಾಯಕರ ಮನವೊಲಿಕೆಗೆ ಯತ್ನ ನಡೆಸಿದರು. ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸ್ ಅಧಿಕಾರಿಗಳು ಬಿಜೆಪಿ ನಾಯಕರ ಜೊತೆ ಸಂಧಾನ ಸಭೆ ನಡೆಸಿದರು. ಆದರೆ ಸಭೆ ವಿಫಲವಗಿದ್ದು, ಬಿಜೆಪಿ ನಾಯಕರು ಪ್ರತಿಭಟನೆ ಮುಂದುವರೆಸಿದ್ದಾರೆ.
ಇನ್ಸ್ ಪೆಕ್ಟರ್ ಧನಂಜಯ್ ಅಮಾನತು ಆಗುವವರೆಗೂ ನಾವು ಹೋರಾಟ ಕೈಬಿಡುವುದಿಲ್ಲ. ಇನ್ಸ್ ಪೆಕ್ಟರ್ ಅಮಾನತುಗೊಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ಬಂಧಿಸುವುದಾದರೆ ನಮ್ಮ ಕೈಯಲ್ಲಿರುವ ಗಣೇಶ ಮೂರ್ತಿ ಸಮೇತ ಬಂಧಿಸುವಂತೆ ಕಿಡಿಕಾರಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಗಣೇಶ ಮೂರ್ತಿ ಮೆರವಣಿಗೆ ಲಿಂಕ್ ರೋಡ್ ನಲ್ಲಿ ನಡೆಸುವಂತಿಲ್ಲ ಎಂದು ಅಮಾಯಕ ಹಿಂದೂ ಯುವಕರಿಗೆ ಇನ್ಸ್ ಪೆಕ್ಟರ್ ಕಂಡೀಷನ್ ಹಾಕುತ್ತಿದ್ದಾರೆ. ಟಿ.ನರಸೀಪುರದಲ್ಲಿ ಹಲವು ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿವೆ. ಅವುಗಳಿಗೆ ಕಾರಣ ಇನ್ಸ್ ಪೆಕ್ಟರ್ ಧನಂಜಯ್, ಇಸ್ಪೀಟ್ ದಂಧೆ ನಡೆಯುತ್ತಿದೆ. ದಂಧೆಯಲ್ಲಿ ಧನಂಜಯ್ ನೇರವಾಗಿ ಭಾಗಿಯಾಗಿದ್ದಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣಹಾಕದೇ ಇನ್ಸ್ ಪೆಕ್ಟರ್ ಗಣೇಶ ಮೂರ್ತಿ ಮೆರವಣಿಗೆ ಮೇಲೆ ನಿಯಂತ್ರಣ ಸಾಧಿಸಲು ಹೊರಟಿದ್ದಾರೆ. ಇನ್ಸ್ ಪೆಕ್ಟರ್ ಅವರ ಈ ನಡೆ ಸಹಿಸಲು ಸಾಧ್ಯವಿಲ್ಲ. ತಕ್ಷಣ ಅವರನ್ನು ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಠಾಣೆಯ ಮುಂದೆ ಬಿಜೆಪಿ ಧರಣಿ ನಡೆಸಲಿದೆ ಎಂದು ಹೇಳಿದರು.
ಇನ್ಸ್ ಪೆಕ್ಟರ್ ಅಮಾನತು ಆಗುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಬಂಧನವಾದರೂ ಹೆದರಲ್ಲ. ಇದೇ ಜಾಗದಲ್ಲಿ ಕುಳಿತು ಧರಣಿ ಮುಂದುವರೆಸುತ್ತೇವೆ ಎಂದು ಗುಡುಗಿದ್ದಾರೆ.
ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಯದುವೀರ್ ಒಡೆಯರ್,ಬಿಜೆಪಿ ಸಹಾಸಕರು, ಮೈಸೂರು ಭಾಗದ ಬಿಜೆಪಿ ನಾಯಕರು, ಹಾಗೂ ಕಾರ್ಯಕರ್ತರು ಭಾಗವಿಸಿದ್ದಾರೆ.

