ಬೆಂಗಳೂರು: ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ನರೇಂದ್ರ ಮೋದಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಿಂದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ, ಪ್ರಧಾನಿ ಮೋದಿಯವರು ಹಗಲು ರಾತ್ರಿ ನಮಗಾಗಿ ಸೇವೆ ಮಾಡುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಅವರು ಒಂಂದೇ ಒಂದು ದಿನ ರಜೆ ಪಡೆಯಲಿಲ್ಲ. ಪ್ರಧಾನಿ ಮೋದಿಯವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 17ರಿಂದ ಒಂದು ತಿಂಗಳ ಕಾಲ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ ನಡೆಸಲಾಗುವುದು ಎಂದರು.
ಅಕ್ಟೋಬರ್ 17ರಂದು ಸುಶಾಸನ ಸಂವಾದ ನಡೆಸುತ್ತೇವೆ. ಈ ಒಂದು ತಿಂಗಳಲ್ಲಿ ದೇಶಾದ್ಯಂತ 12 ಕಾರ್ಯಕ್ರಮ ನಡೆಸುತ್ತಿದ್ದೇವೆ. ಸೇವಾ ಸುಶಾಸನ ಮತ್ತು ಬಡವರ ಕಲ್ಯಾಣ ಮೋದಿಯವರ ಸಂಕಲ್ಪ. ಮೋದಿಯವರು ರಾಜಕೀಯದ ದಿಕ್ಕು, ದೆಸೆಗಳನ್ನೇ ಬದಲಾಯಿಸಿದ್ದಾರೆ. ತುಷ್ಟೀಕರಣ, ಕುಟುಂಬ ರಾಜಕಾರಣ, ಅಸಮಾನತೆ, ಅಭಿವೃದ್ಧಿ ಶೂನ್ಯ ಜನವಿರೋಧಿ ಆಡಳಿತದಿಂದ ದೇಶದ ರಾಜಕೀಯ ಸಿಲುಕಿತ್ತು. ಮೋದಿ ಬಂದ ನಂತರ ದೇಶದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಜನರ ಬಳಿ ರಿಪೋರ್ಟ್ ಕಾರ್ಡ್ ತೆಗೆದುಕೊಂಡು ಹೋಗುವ ಸಂಪ್ರದಾಯ ಶುರುಮಾಡಿದ್ದು ಮೋದಿ. ಮೋದಿ ಹೇಳಿದ್ದನ್ನು ಮಾಡಿದರು, ಹೇಳದಿರುವುದನ್ನು ಮಾಡಿ ತೋರಿಸಿದರು. ರಾಷ್ಟ್ರೀಯ ಬದ್ದತೆಯ ವಿಷಯದಲ್ಲಿ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡುವುದನ್ನು ಜಗತ್ತಿಗೆ ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ ಎಂದರು.
ರಾಜ್ಯದಿಂದ ಹಿಡಿದು ಕೇಂದ್ರದವರೆಗೂ ಅವರ ಬದ್ಧತೆ ಬದಲಾಗಿಲ್ಲ. ಸೇವೆ, ಬದ್ಧತೆ, ಸಮರ್ಪಣಾ ಮನೋಭಾವದಿಂದ ಪ್ರಧಾನ ಸೇವಕನ ರೂಪದಲ್ಲಿ ಮೋದಿ ಕೆಲಸ ಮಾಡುತ್ತಿದ್ದಾರೆ. ಜನ ಕಲ್ಯಾಣವೇ ಮೋದಿಯವರ ಆದ್ಯತೆಯಾಗಿದೆ. 2047ಕ್ಕೆ ವಿಕಸಿತ ಭಾರತ ಪ್ರಧಾಅನಿ ಮೋದಿಯವರ ಗುರಿಯಾಗಿದೆ ಎಂದು ಹೇಳಿದರು.
ನಾವು ಯಾರನ್ನೂ ಕೆಣಕುವುದಿಲ್ಲ. ಕೆಣಕಿದರೆ ಬಿಡುವುದಿಲ್ಲ ಎಂಬುದನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿದ್ದು ಮೋದಿಯವರ ಬದ್ಧತೆ. 25 ಕೋಟಿ ಜನರು ಬಿಪಿಎಲ್ ನಿಂದ ಹೊರಬಂದಿದ್ದಾರೆ. ನಮ್ಮದು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶ. ಪ್ರಧಾನಿ ಮೋದಿಯವರು ಆರ್ಥಿಕ ನೀತಿಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿಗಳು, ಏರ್ ಪೋರ್ಟ್ ಗಳು, ರೈಲ್ವೆ, ಭದ್ರತೆ ವಿಚಾರದಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ರಕ್ಷಣಾ ವಲಯದ ರಫ್ತು 5,500% ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾತುಗಳನ್ನು ಜಗತ್ತು ಕೇಳುತ್ತಿದೆ. ಬ್ರಿಕ್ಸ್ ಸಮ್ಮೇಳನದಲ್ಲಿಯೂ ಒಮ್ಮದತ ನಿರ್ಣಯಗಳು ಅಂಗೀಕಾರವಾಗಿದೆ. 26 ದೇಶಗಳು ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ಗೌರವ ಪ್ರಶಸ್ತಿಗಳನ್ನು ನೀಡಿವೆ. ಪ್ರಧಾನಿ ಮೋದಿಯವರ ಕಾರ್ಯಕ್ರಮಗಳನ್ನು ಜನರು ಒಪ್ಪಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

