ಗ್ರಾಮೀಣ ಜನರ ಉದ್ಯೋಗಕ್ಕಿಲ್ಲ ಖಾತ್ರಿ. ಮನರೇಗಾ ಯೋಜನೆಯನ್ನು ಕೊನೆಗೊಳಿಸಿ, ಅದರ ಬದಲಾಗಿ ತಂದಿರುವ ವಿಬಿ ಗ್ರಾಮ್ ಜಿ ಯೋಜನೆಯನ್ನು ಜಾರಿಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
“ಮಾರ್ಚ್ 31 ರಂದು ಸೂರ್ಯ ಮುಳುಗುತ್ತಿದ್ದಂತೆ, ಗ್ರಾಮೀಣ ಭಾರತಕ್ಕೆ ಎರಡು ದಶಕಗಳ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯು ಸದ್ದಿಲ್ಲದೆ ಕೊನೆಗೊಳ್ಳಲಿದೆ. ಏಪ್ರಿಲ್ 1ರಂದು, ವಿಬಿ ಗ್ರಾಮ್ ಜಿ ಯೋಜನೆಯು ಜಾರಿಯಾಗುವ ಸಣ್ಣ ಲಕ್ಷಣಗಳೂ ಕಾಣುತ್ತಿಲ್ಲ” ಎಂದು ಸಚಿವರು ಹೇಳಿದ್ದಾರೆ.
“ಇಷ್ಟರಲ್ಲಾಗಲೇ ವಿಬಿ ಗ್ರಾಮ್ ಜಿ ಯೋಜನೆಯು ಗ್ರಾಮೀಣ ಕಾರ್ಮಿಕರಿಗೆ, ಗ್ರಾಮಗಳಿಗೆ ತಲುಪಿಸಲು ಬೇಕಾದ ಅಗತ್ಯ ರೂಪುರೇಷೆಗಳನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಬೇಕಿತ್ತು. ಆದರೆ ಇನ್ನೂ ಯಾವುದೇ ನಿಯಮಗಳು ರೂಪುಗೊಂಡಿಲ್ಲ. ನಿಧಿ ಹಂಚಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ, ಗ್ರಾಮ ಪಂಚಾಯತ್‌ಗಳನ್ನು ವರ್ಗೀಕರಿಸಲು ಯಾವುದೇ ಅಂತಿಮ ನಿಯತಾಂಕಗಳು ತಯಾರಾಗಿಲ್ಲ, ಸಾಮಾಜಿಕ ಲೆಕ್ಕ ಪರಿಶೋಧನೆಯಂತಹ ಪ್ರಮುಖ ಪ್ರಕ್ರಿಯೆಗಳು ಸಹ ವ್ಯಾಖ್ಯಾನಿಸಲ್ಪಟ್ಟಿಲ್ಲ” ಎಂದು ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಿಡಿ ಕಾರಿದ್ದಾರೆ.
“ಅತ್ಯಂತ ಕೆಟ್ಟ ಸಮಯದಲ್ಲಿ ಗ್ರಾಮೀಣ ಉದ್ಯೋಗದ ಬಗೆಗಿನ ಈ ನಿರ್ವಾತವು ತಲೆದೋರಿದೆ. ಈ ಬೇಸಿಗೆಯ ಸಮಯವು ಗ್ರಾಮೀಣ ಜನರಿಗೆ ಉದ್ಯೋಗದ ಗರಿಷ್ಠ ಬೇಡಿಕೆಯ ತಿಂಗಳುಗಳಾಗಿವೆ, ಉದ್ಯೋಗ ಖಾತರಿಗೆ ಹೆಚ್ಚಿನ ಅವಲಂಬನೆ ಹೊಂದುವ ಸಮಯವಿದು, ಇಂತಹ ಸಮಯದಲ್ಲೇ ಉದ್ಯೋಗ ಒದಗಿಸುವ ಯೋಜನೆಯು ಸ್ಥಗಿತಗೊಂಡಿದೆ” ಎಂದರು.
“ಅನುಮೋದನೆಗಳು ವಿಳಂಬವಾಗುತ್ತಿವೆ ಮತ್ತು ಬೇಡಿಕೆಯ ಹೊರತಾಗಿಯೂ ಕುಟುಂಬಗಳು ಉದ್ಯೋಗವನ್ನು ಪಡೆಯಲಾಗುತ್ತಿಲ್ಲ ಎಂಬ ವರದಿಗಳು ಬಂದಿವೆ. ಕೇಂದ್ರ ಸರ್ಕಾರವು ಕಾನೂನಾತ್ಮಕ ಉದ್ಯೋಗದ ಖಾತರಿಯನ್ನು ತೆಗೆದು ನಿಯಮ ಆಧಾರಿತ ಹಂಚಿಕೆಯಾಗಿ ಬದಲಾವಣೆ ಮಾಡಿರುವುದು ನಕಾರಾತ್ಮಕ ಪರಿಣಾಮವನ್ನು ತೋರಿಸಲು ಪ್ರಾರಂಭಿಸಿದೆ” ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದರ ಜೊತೆಗೆ, ಕೃಷಿ ಚಟುವಟಿಕೆಗಳ ಅವಧಿಗಳಲ್ಲಿ 60 ದಿನಗಳ ಕಡ್ಡಾಯ ಸ್ಥಗಿತವು ಗ್ರಾಮೀಣ ಜನರು ಉದ್ಯೋಗ ಪಡೆಯುವ ಅವಕಾಶವನ್ನು ಮತ್ತಷ್ಟು ನಿರ್ಬಂಧಿಸುತ್ತದೆ. ಕೇಂದ್ರದ ಬಿಜೆಪಿ ಸರ್ಕಾರ ವಿಬಿ ಗ್ರಾಮ್ ಜಿ ಯೋಜನೆಯು ಗ್ರಾಮೀಣ ಭಾರತವನ್ನು ಪರಿವರ್ತಿಸುತ್ತದೆ ಎಂದು ಹೇಳಿಕೊಂಡಿತ್ತು, ಆದರೆ ಅದು ಹೀಗೆ ಜನರ ಜೀವನೋಪಾಯಕ್ಕೆ ಮಾರಕವಾಗಿ ಮತ್ತು ನಕಾರಾತ್ಮಕ ಪರಿವರ್ತನೆ ಎನ್ನುವುದು ಈಗ ವಾಸ್ತವವಾಗಿ ಕಂಡುಬರುತ್ತಿದೆ” ಎಂದು ಸಚಿವರು ಹೇಳಿದ್ದಾರೆ.
“ಗ್ರಾಮೀಣ ಭಾರತದಲ್ಲಿ ಮನರೇಗಾ ಯೋಜನೆಯ ಸ್ಥಗಿತದಿಂದಾಗಿರುವ ಬಿಕ್ಕಟ್ಟು ಈಗ ತೆರೆದುಕೊಳ್ಳುತ್ತಿದೆ. ಬಿಜೆಪಿಯ ಕೇಂದ್ರ ಸರ್ಕಾರವು ಬಿಕ್ಕಟ್ಟುಗಳನ್ನು ನಿರ್ವಹಿಸುವಲ್ಲಿ ವೈಫಲ್ಯವಾಗಿರುವ ಹಿಂದಿನ ದಾಖಲೆಯನ್ನು ಗಮನಿಸಿದರೆ, ಗ್ರಾಮೀಣ ಜನರ ಜೀವನೋಪಾಯದ ಭರವಸೆ ಕಳೆದುಹೋಗುವ ಆತಂಕವು ನಮ್ಮೆಲ್ಲರನ್ನೂ ಚಿಂತೆಗೀಡು ಮಾಡುತ್ತದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

