ಮೈಸೂರು: ಗಣೇಶೋತ್ಸವ ಮೆರವಣಿಗೆ ವಿಚಾರವಾಗಿ ಮಸೀದಿ ರಸ್ತೆಗಳಲ್ಲಿ ಮೆರವಣಿಗೆ ಸಾಗುವಂತಿಲ್ಲ ಎಂದು ಟಿ.ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿ ಹಾಕಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ತೀವ್ರಗೊಳಿಸಿದ ಬೆನ್ನಲ್ಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ನಾಯಕರಿಗೆ ಟಿ.ನರಸೀಪುರ ಪೊಲೀಸ್ ಠಾಣೆ ಎದುರು ಧರಣಿ ನಡೆಸಲು ಪೊಲೀಸರು ಅವಕಾಶ ನೀಡದ ಕಾರಣ, ಟಿ.ನರಸೀಪುರದ ಸರ್ಕಾರಿ ಅತಿಥಿಗೃಹದ ಬಳಿ ಬಿಜೆಪಿ ನಾಯಕರು ಪ್ರತಿಭಟನೆ ಪ್ರಾರಂಭಿಸಿದ್ದರು. ಇನ್ಸ್ ಪೆಕ್ಟರ್ ಧನಂಜಯ್ ಅವರನ್ನು ಅಮಾನೌಗೊಳಿಸಬೇಕು ಇಲ್ಲವೇ ತಕ್ಷಣ ವರ್ಗಾವಣೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಶಾಸಕರು ಪಾಲ್ಗೊಳ್ಳುತ್ತಿದ್ದಂತೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ಈ ವೇಳೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಜೆಪಿ ನಾಯಕರ ಮನವೊಲಿಸಿವ ನಿಟ್ಟಿನಲ್ಲಿ ಶಾಂತಿ ಸಭೆ ನಡೆಸಲಾಯಿತು. ಆದರೆ ಶಾಂತಿ ಸಭೆ ವಿಫಲವಾಯಿತು. ಇನ್ಸ್ ಪೆಕ್ಟರ್ ಅಮಾನತುಗೊಳಿಸುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಟಿ.ನರಸೀಪುರ ಪಿಐ ಧನಂಜಯ್ ಇಸ್ಪೀಟ್ ದಂಧೆ ನಡೆಸುತ್ತಿದ್ದಾರೆ. ನರಸೀಪುರದ ಅಕ್ರಮಗಳ ಕಿಂಗ್ಪಿನ್ ಪಿಐ ಧನಂಜಯ. ಹೀಗಾಗಿ ಇನ್ಸ್ಪೆಕ್ಟರ್ ಧನಂಜಯರನ್ನ ಸಸ್ಪೆಂಡ್ ಮಾಡ್ಬೇಕು. ಈಗ ಗಣೇಶೋತ್ಸವ ಮೆರವಣಿಗೆಗೆ ಧಮ್ಕಿ ಹಾಕುತ್ತಿದ್ದಾರೆ. ಇಂತಹ ಇನ್ಸ್ ಪೆಕ್ಟರ್ ಅವರನ್ನು ಸಸ್ಪೆಂಡ್ ಮಾಡಲೇಬೇಕು. ಅವರು ಅಮಾನತು ಆಗುವವರೆಗೂ ಆಹೋರಾತ್ರಿ ಧರಣಿ ನಡಿಸುತ್ತೇವೆ ಎಂದು ಹೇಳಿದರು.
ಅಹೋರಾತ್ರಿ ಧರಣಿ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ಕೈಯಲ್ಲಿ ಗಣೇಶ ಮೂರ್ತಿ ಹಿಡಿದು ಅತಿಥಿ ಗೃಹದ ಬಳಿ ರಸ್ತೆಯಲ್ಲಿ ಧರಣಿ ಕುಳಿತು ಸರ್ಕಾರ ಹಾಗೂ ಇನ್ಸ್ ಪೆಕ್ಟರ್ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಟಿ.ನರಸೀಪುರದಲ್ಲಿ ಭಾರಿ ಹೈಡ್ರಾಮ ಸೃಷ್ಟಿಯಾಯಿತು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ಬಿಜೆಪಿ ನಯಕರನ್ನು ವಶಕ್ಕೆ ಪಡೆದರು.
ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಶ್ರೀವತ್ಸ, ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರನ್ನು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳಲ್ಲಿ ತುಂಬಿ ಕರೆದೊಯ್ದಿದ್ದಾರೆ. ಮುಂಜಾಗೃತಾ ಕ್ರಮವಾಗಿ ಟಿ.ನರಸೀಪುರದಾದ್ಯಂತ ಪೊಲೀಸರು ಕಟ್ಟೆಚ್ಚರವಹಿಸಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಟಿ.ನರಸೀಪುರ ಇನ್ಸ್ ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿಗೆ ಕರೆ ನೀಡಿದ ಮಾಜಿ ಸಂಸದ ಪ್ರತಾಪ್ ಸಿಂಹ
ಮೈಸೂರು: ಮಸೀದಿ ರಸ್ತೆಯಲ್ಲಿ ಗಣೇಶ ಮೆರವಣಿಗೆ ಸಾಗುವಂತಿಲ್ಲ ಎಂಬ ಹೇಳಿಕೆ ನೀಡಿದ್ದ ಟಿ.ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಅಮಾನತಿಗೆ ರಾಜ್ಯ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಟಿ.ನರಸೀಪುರದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಟಿ.ನರಸೀಪುರ ಪೊಲೀಸ್ ಠಾಣೆ ಎದುರು ಬಿಜೆಪಿ ನಾಯಕರು ಕೈಯಲ್ಲಿ ಗಣೇಶ ಮೂರ್ತಿ ಹಿಡಿದು ಪ್ರತಿಭಟನೆ ನಡೆಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾ ನಿರತ ಬಿಜೆಪಿ ನಾಯಕರ ಮನವೊಲಿಕೆಗೆ ಯತ್ನ ನಡೆಸಿದರು. ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸ್ ಅಧಿಕಾರಿಗಳು ಬಿಜೆಪಿ ನಾಯಕರ ಜೊತೆ ಸಂಧಾನ ಸಭೆ ನಡೆಸಿದರು. ಆದರೆ ಸಭೆ ವಿಫಲವಗಿದ್ದು, ಬಿಜೆಪಿ ನಾಯಕರು ಪ್ರತಿಭಟನೆ ಮುಂದುವರೆಸಿದ್ದಾರೆ.
ಇನ್ಸ್ ಪೆಕ್ಟರ್ ಧನಂಜಯ್ ಅಮಾನತು ಆಗುವವರೆಗೂ ನಾವು ಹೋರಾಟ ಕೈಬಿಡುವುದಿಲ್ಲ. ಇನ್ಸ್ ಪೆಕ್ಟರ್ ಅಮಾನತುಗೊಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ಬಂಧಿಸುವುದಾದರೆ ನಮ್ಮ ಕೈಯಲ್ಲಿರುವ ಗಣೇಶ ಮೂರ್ತಿ ಸಮೇತ ಬಂಧಿಸುವಂತೆ ಕಿಡಿಕಾರಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಗಣೇಶ ಮೂರ್ತಿ ಮೆರವಣಿಗೆ ಲಿಂಕ್ ರೋಡ್ ನಲ್ಲಿ ನಡೆಸುವಂತಿಲ್ಲ ಎಂದು ಅಮಾಯಕ ಹಿಂದೂ ಯುವಕರಿಗೆ ಇನ್ಸ್ ಪೆಕ್ಟರ್ ಕಂಡೀಷನ್ ಹಾಕುತ್ತಿದ್ದಾರೆ. ಟಿ.ನರಸೀಪುರದಲ್ಲಿ ಹಲವು ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿವೆ. ಅವುಗಳಿಗೆ ಕಾರಣ ಇನ್ಸ್ ಪೆಕ್ಟರ್ ಧನಂಜಯ್, ಇಸ್ಪೀಟ್ ದಂಧೆ ನಡೆಯುತ್ತಿದೆ. ದಂಧೆಯಲ್ಲಿ ಧನಂಜಯ್ ನೇರವಾಗಿ ಭಾಗಿಯಾಗಿದ್ದಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣಹಾಕದೇ ಇನ್ಸ್ ಪೆಕ್ಟರ್ ಗಣೇಶ ಮೂರ್ತಿ ಮೆರವಣಿಗೆ ಮೇಲೆ ನಿಯಂತ್ರಣ ಸಾಧಿಸಲು ಹೊರಟಿದ್ದಾರೆ. ಇನ್ಸ್ ಪೆಕ್ಟರ್ ಅವರ ಈ ನಡೆ ಸಹಿಸಲು ಸಾಧ್ಯವಿಲ್ಲ. ತಕ್ಷಣ ಅವರನ್ನು ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಠಾಣೆಯ ಮುಂದೆ ಬಿಜೆಪಿ ಧರಣಿ ನಡೆಸಲಿದೆ ಎಂದು ಹೇಳಿದರು.
ಇನ್ಸ್ ಪೆಕ್ಟರ್ ಅಮಾನತು ಆಗುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಬಂಧನವಾದರೂ ಹೆದರಲ್ಲ. ಇದೇ ಜಾಗದಲ್ಲಿ ಕುಳಿತು ಧರಣಿ ಮುಂದುವರೆಸುತ್ತೇವೆ ಎಂದು ಗುಡುಗಿದ್ದಾರೆ.
ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಯದುವೀರ್ ಒಡೆಯರ್,ಬಿಜೆಪಿ ಸಹಾಸಕರು, ಮೈಸೂರು ಭಾಗದ ಬಿಜೆಪಿ ನಾಯಕರು, ಹಾಗೂ ಕಾರ್ಯಕರ್ತರು ಭಾಗವಿಸಿದ್ದಾರೆ.

