ರಾಜ್ಯಸಭೆ ಚುನಾವಣೆಗೆ ಬಿಜೆಪಿ 9 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬಿಹಾರದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ.
ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 5 ಕೊನೆಯ ದಿನವಾಗಿದೆ. ಮಂಗಳವಾರ ಬಿಜೆಪಿ ರಾಜ್ಯಸಭೆ ಚುನಾವಣೆಗೆ 9 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಬಿಹಾರ ರಾಜ್ಯದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಬಿಹಾರ ವಿಧಾನಸಭೆ ಶಾಸಕರಾಗಿದ್ದ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಅವರು 2026ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದರು.
ನಿತಿನ್ ನಬಿನ್ ಅವರು ಪ್ರಸ್ತುತ ಬಿಜೆಪಿ ಅಧ್ಯಕ್ಷರು. ಆದ್ದರಿಂದ ಅವರು ದೆಹಲಿಯಲ್ಲಿ ಇರಲು ಅನುಕೂಲವಾಗುವಂತೆ ಅವರನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟದ ಸರ್ಕಾರವಿದ್ದು, ನಿತಿನ್ ಸುಲಭವಾಗಿ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ.
ಜನವರಿ 20, 2026ರಂದು ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮುನ್ನ ಅವರು ಡಿಸೆಂಬರ್ 14, 2025 ರಿಂದ ಜನವರಿ 20, 2026ರವರೆಗೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದರು.
ಬಿಹಾರದ ರಾಜಕೀಯದಲ್ಲಿ ಅವರು 5 ಬಾರಿ ಶಾಸಕರಾಗಿ ಮತ್ತು ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಈಗ ರಾಜ್ಯಸಭೆ ಮೂಲಕ ರಾಷ್ಟ್ರ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ನಿತಿನ್ ನಬಿನ್ ಪರಿಚಯ: ನಿತಿನ್ ನಬಿನ್ ಮೇ 23, 1980ರಂದು ಜಾರ್ಖಂಡ್ನ ರಾಂಚಿಯಲ್ಲಿ ಜನಿಸಿದರು. ತಂದೆ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ. ಬಿಜೆಪಿ ಹಿರಿಯ ನಾಯಕ ಮತ್ತು ಪಾಟ್ನಾ ಪಶ್ಚಿಮ ಕ್ಷೇತ್ರದಿಂದ 4 ಬಾರಿ ಬಿಹಾರ ವಿಧಾನಸಭೆಯ ಸದಸ್ಯರಾಗಿದ್ದವರು. ತಾಯಿ ದಿವಂಗತ ಮೀರಾ ಸಿನ್ಹಾ.
ನಿತಿನ್ ನಬಿನ್ ಪ್ರಾಥಮಿಕ ಶಿಕ್ಷಣವು ಪಾಟ್ನಾದ ಸೇಂಟ್ ಮೈಕೆಲ್ಸ್ ಹೈಸ್ಕೂಲ್ನಲ್ಲಿ ಪೂರ್ಣಗೊಂಡಿತು. ಅಲ್ಲಿ ಅವರು 1996 ರಲ್ಲಿ ಸಿಬಿಎಸ್ಇ (CBSE) 10ನೇ ತರಗತಿಯ ಪರೀಕ್ಷೆಯನ್ನು ಉತ್ತೀರ್ಣರಾದರು.
ನಂತರ, ಅವರು ನವದೆಹಲಿಯ ಸಿಎಸ್ಕೆಎಮ್ (CSKM) ಪಬ್ಲಿಕ್ ಸ್ಕೂಲ್ನಲ್ಲಿ ತಮ್ಮ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಡೆದರು ಮತ್ತು 1998 ರಲ್ಲಿ ಇಂಟರ್ಮೀಡಿಯೇಟ್ ಪರೀಕ್ಷೆಯನ್ನು ಪೂರ್ಣಗೊಳಿಸಿದರು.
ನಿತಿನ್ ನಬಿನ್ ಚಿಕ್ಕ ವಯಸ್ಸಿನಲ್ಲೇ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು 2006ರಲ್ಲಿ ಪಾಟ್ನಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಬಿಹಾರ ವಿಧಾನಸಭೆಗೆ ಆಯ್ಕೆಯಾದರು.
2010ರಿಂದ ಅವರು ಬಂಕಿಪುರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದು, 2010, 2015, 2020 ಮತ್ತು 2025ರಲ್ಲಿ ಜಯಗಳಿಸುವ ಮೂಲಕ 5 ಬಾರಿ ನಿರಂತರವಾಗಿ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಹಾರ ಸರ್ಕಾರದಲ್ಲಿ ಸಚಿವ ಸಂಪುಟದ ಸಚಿವರಾಗಿ ರಸ್ತೆ ನಿರ್ಮಾಣ, ನಗರಾಭಿವೃದ್ಧಿ ಮತ್ತು ವಸತಿ ಹಾಗೂ ಕಾನೂನು ಖಾತೆಗಳನ್ನು ನಿಭಾಯಿಸಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕತ್ವದ ಸ್ಥಾನಗಳನ್ನು ಅಲಂಕರಿಸಿರುವ ಅವರು, ಸಿಕ್ಕಿಂ ಮತ್ತು ಛತ್ತೀಸ್ಗಢದಂತಹ ರಾಜ್ಯಗಳಲ್ಲಿ ಪಕ್ಷದ ಪ್ರಮುಖ ಸಂಘಟನಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

