ಮಧ್ಯಪ್ರದೇಶ: ಅಧಿಕಾರದ ಮದ ಮತ್ತು ವಿವಿಐಪಿ ಸಂಸ್ಕೃತಿಯ ಅಹಂಕಾರಕ್ಕೆ ಮಧ್ಯಪ್ರದೇಶದ ಶಿವಪುರಿಯಲ್ಲಿ ಐವರು ಅಮಾಯಕರು ಬಲಿಯಾಗಿದ್ದಾರೆ. ಪಿಚೋರ್ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಲೋಧಿ ಅವರ ಪುತ್ರ ದಿನೇಶ್ ಲೋಧಿ ಎಂಬಾತ ತನ್ನ ಐಷಾರಾಮಿ ಥಾರ್ ಎಸ್‌ಯುವಿ ವಾಹನವನ್ನು ಜನರ ಮೇಲೆ ಹರಿಸುವ ಮೂಲಕ ಅಮಾನವೀಯತೆ ಮೆರೆದಿದ್ದಾನೆ.
ಅಪಘಾತ ಮಾಡಿದ್ದಲ್ಲದೆ, ಗಾಯಾಳುಗಳ ಜೊತೆ ವಾಗ್ವಾದ ನಡೆಸಿದ ಶಾಸಕನ ಪುತ್ರ, “ನಾನು ಸೈರನ್ ಹಾಕುತ್ತಿದ್ದರೂ ನೀವು ದಾರಿ ಬಿಟ್ಟಿಲ್ಲವೇಕೆ?” ಎಂದು ಉದ್ಧಟತನದ ಪ್ರಶ್ನೆ ಕೇಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ
ಗುರುವಾರ ಬೆಳಿಗ್ಗೆ ಸುಮಾರು 7:30ರ ಸುಮಾರಿಗೆ ಈ ಘಟನೆ ನಡೆದಿದೆ. ದಿನೇಶ್ ಲೋಧಿ ಅತಿ ವೇಗವಾಗಿ ಚಲಿಸುತ್ತಿದ್ದ ತನ್ನ ಥಾರ್ ವಾಹನದಿಂದ ಬೈಕ್‌ನಲ್ಲಿದ್ದ ಮೂವರು ಯುವಕರು ಮತ್ತು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಹಿಳೆಯರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ.
ವಿಶೇಷವೆಂದರೆ, ಆ ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ “ಪ್ರೀತಮ್ ಲೋಧಿ” ಹಾಗೂ “MLA” ಎಂದು ಬರೆಯಲಾಗಿತ್ತು. ಈ ಭೀಕರ ಅಪಘಾತದಲ್ಲಿ ಸಂಜಯ್ ಪರಿಹಾರ್, ಆಶಿಶ್ ಪರಿಹಾರ್, ಅನ್ಶುಲ್ ಪರಿಹಾರ್, ಸೀತಾ ವರ್ಮಾ ಮತ್ತು ಪೂಜಾ ಸೋನಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ತಲೆ ಮತ್ತು ಕೈಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ.
ವಿಡಿಯೋ ಮಾಡಿದವರಿಗೆ ಬೆದರಿಕೆ
ಅಪಘಾತದ ನಂತರ ಅಲ್ಲಿ ಸೇರಿದ್ದ ಜನರು ಈ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಮುಂದಾದಾಗ, ದಿನೇಶ್ ಲೋಧಿ ಬೆದರಿಕೆ ಹಾಕಿದ್ದಾನೆ. “ಮಗನೇ ವಿಡಿಯೋ ಮಾಡಬೇಡ” ಎಂದು ಅವಾಜ್ ಹಾಕಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಪ್ಪು ಒಪ್ಪಿಕೊಂಡು ಕ್ಷಮೆಯಾಚಿಸುವ ಬದಲು, ಸೈರನ್ ಹಾಕಿದರೂ ನೀವು ಪಕ್ಕಕ್ಕೆ ಸರಿಯಲಿಲ್ಲ ಎಂದು ಗಾಯಾಳುಗಳನ್ನೇ ದಬಾಯಿಸಿರುವುದು ಅವನ ಅಹಂಕಾರವನ್ನು ಎತ್ತಿ ತೋರಿಸುತ್ತಿದೆ.
ಶಾಸಕರ ಪ್ರತಿಕ್ರಿಯೆ:
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಪ್ರೀತಮ್ ಲೋಧಿ, “ಶಾಸಕನಿಗೆ ಸಾರ್ವಜನಿಕರು ಮೊದಲ ಆದ್ಯತೆ, ಕುಟುಂಬವಲ್ಲ. ಕಾನೂನು ತನ್ನ ಕೆಲಸ ಮಾಡಲಿ, ಸಂತ್ರಸ್ತರಿಗೆ ನ್ಯಾಯ ಸಿಗಬೇಕು” ಎಂದು ಹೇಳಿದ್ದಾರೆ. ಸದ್ಯ ಕರೇರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

