ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಶಿಕ್ಷೆ ಪ್ರಮಾಣ ನಾಳೆ ಪ್ರಕಟವಾಗಲಿದೆ.ಏಪ್ರಿಲ್ 15 ರಂದು ನಡೆದ ವಿಚಾರಣೆಯಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 19 ಜನರನ್ನು ದೋಷಿಗಳು ಎಂದು ನ್ಯಾಯಾಲಯ ಘೋಷಿಸಿತ್ತು.ಇಂದು ವಾದ ವಿವಾದ ಆಲಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಾಳೆಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಗೌಡ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ವಿಚಾರಣೆಯಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ 19 ಮಂದಿಯನ್ನು ದೋಷಿಗಳೆಂದು ಘೋಷಿಸಿದ್ದ ನ್ಯಾಯಾಲಯ, ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಬೇಕಿತ್ತು. ಆದರೆ ನಾಳೆಗೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿದೆ.
ಯೋಗೀಶ್ ಗೌಡ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ಏ.9ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ತಾಂತ್ರಿಕ ಕಾರಣಗಳು ಹಾಗೂ ತೀರ್ಪು ಸಿದ್ಧಪಡಿಸುವ ಪ್ರಕ್ರಿಯೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಏ.15ಕ್ಕೆ ಮೂಂದೂಡಿತ್ತು. ನಿನ್ನೆ ನ್ಯಾಯಾಲಯ ಆರೋಪಿಗಳಾದ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಅವರನ್ನು 2016ರ ಜೂ.15ರಂದು ಧಾರವಡದ ಉದಯ ಜಿಮ್ ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಕೊಲೆಯಾದ ಯೋಗೀಶ್ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ತಿಳಿದು ಬಂದಿತ್ತು. ಈ ಕೊಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಕೈವಾಡವಿರುವ ಶಂಕೆ ಹಿನ್ನೆಲೆಯಲ್ಲಿ 2020ರ ನ.5ರಂದು ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ನಿನ್ನೆ ನ್ಯಾಯಾಲಯದಲ್ಲಿ ನಡೆದಿದ್ದೇನು?
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ಏಪ್ರಿಲ್ 15 ರಂದು ಈ ಮಹತ್ವದ ತೀರ್ಪು ಪ್ರಕಟಿಸಿದರು. ತೀರ್ಪು ಓದುತ್ತಿದ್ದಂತೆ ವಿನಯ್ ಕುಲಕರ್ಣಿ ಅವರು ನ್ಯಾಯಾಲಯದಲ್ಲೇ ಕುಸಿದು ಕುಳಿತು ಕಣ್ಣೀರಿಟ್ಟರು. ಇಷ್ಟು ವರ್ಷಗಳ ಕಾಲ ನಡೆಸಿದ ಕಾನೂನು ಹೋರಾಟದ ಪ್ರಯತ್ನವೆಲ್ಲಾ ಒಂದೇ ತೀರ್ಪಿನೊಂದಿಗೆ ಅಂತ್ಯವಾಯಿತು ಎಂಬ ನೋವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ವೇಳೆ ಕೋರ್ಟ್ ಆವರಣದಲ್ಲಿದ್ದ ಅವರ ಮೂವರು ಮಕ್ಕಳೂ ಕೂಡ ಕಣ್ಣೀರಿಟ್ಟರು.
ಶಾಸಕ ಸ್ಥಾನಕ್ಕೆ ಕುತ್ತು?
ಕಾನೂನಿನ ಪ್ರಕಾರ, ಯಾವುದೇ ಶಾಸಕರಿಗೆ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ಪ್ರಕಟವಾದರೆ, ಅವರು ತಕ್ಷಣವೇ ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ.

