ಬೆಂಗಳೂರು-ಮುಂದಿನ 2028ರ ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷಗಳ ಕಾಲಾವಕಾಶವಿದ್ದರೂ, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ರಾಜ್ಯದಲ್ಲಿ ಪಕ್ಷದ ಯಶಸ್ಸು ಪಡೆಯಲು ಹೈಕಮಾಂಡ್ ಹಾವುಪಾಡು
ಅದರಲ್ಲೂ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನ ಹಾಗೂ ಭಿನ್ನಾಭಿಪ್ರಾಯಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೇರಿಸಲು ಬಿಜೆಪಿ ರಾಷ್ಟ್ರೀಯ ಹೈಕಮಾಂಡ್ ಬಿಗಿ ರಣತಂತ್ರ ಹಾಗೂ ‘ಮಾಸ್ಟರ್ ಪ್ಲ್ಯಾನ್’ ರೂಪಿಸಿದೆ.
ಕಳೆದ ಕೆಲವು ಕಾಲದಿಂದ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದೊಳಗೆ ಒಮ್ಮತದ ಕೊರತೆ ಎದ್ದು ಕಾಣುತ್ತಿದೆ.
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಇತರೆ ಹಿರಿಯ ನಾಯಕರ ನಡುವಿನ ಅಂತರ, ಪ್ರಮುಖ ನಾಯಕರ ಪಕ್ಷಾಂತರ ಹಾಗೂ ಅಸಮಾಧಾನಗಳಿಂದಾಗಿ ‘ಮನೆಯೊಂದು ಹತ್ತು ಬಾಗಿಲು’ ಎಂಬಂತಾಗಿದೆ.
ಈ ಬೆಳವಣಿಗೆಗಳು ಮುಂಬರುವ ಚುನಾವಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದನ್ನು ಅರಿತಿರುವ ವರಿಷ್ಠರು, ಈಗಿನಿಂದಲೇ ಸರಿಪಡಿಸಲು ಮುಂದಾಗಿದ್ದಾರೆ.
ಪಕ್ಷದಿಂದ ದೂರ ಉಳಿದಿರುವ ಅಥವಾ ಉಚ್ಚಾಟನೆಗೊಂಡಿರುವ ಕೆ.ಎಸ್. ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪ್ರಮುಖ ಹಾಗೂ ಪ್ರಭಾವಿ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತಂದು ಮುಖಂಡರ ನಡುವಿನ ಕಚ್ಚಾಟ ಶಮನಗೊಳಿಸುವುದು ಹೈಕಮಾಂಡ್ ಚಿಂತನೆಯಾಗಿದೆ.
ಪಕ್ಷದ ಸಂಘಟನೆಗೆ ಹೊಸ ರೂಪುರೇಷೆ ನೀಡಲು ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಅಥವಾ ಪ್ರಮುಖ ಜವಾಬ್ದಾರಿಗಳ ಪುನರ್ ಹಂಚಿಕೆ ಕುರಿತು ವಲಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಕಾಂಗ್ರೆಸ್ ಶಾಸಕರ ಅಸಮಾಧಾನದ ಸಿನಾರಿ
ಕಾಂಗ್ರೆಸ್ ಶಾಸಕರ ಮೇಲೆ ಕಣ್ಣು: ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಭುಗಿಲೇಳುವ ಸಾಧ್ಯತೆಯಿದ್ದು, ಅಸಮಾಧಾನಿತ ಹಾಲಿ ಹಾಗೂ ಮಾಜಿ ಶಾಸಕರನ್ನು ಬಿಜೆಪಿಗೆ ಸೆಳೆಯಲು ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಹಲವು ನಾಯಕರು ಬಹಿರಂಗವಾಗಿಯೇ ಸುಳಿವು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ, “ಕಾಂಗ್ರೆಸ್‌ನಲ್ಲಿ ಶಾಸಕರ ಅಸಮಾಧಾನ ಹೆಚ್ಚುತ್ತಿದ್ದು, ಸೂಕ್ತ ಸಮಯದಲ್ಲಿ ಹಲವು ನಾಯಕರು ಬಿಜೆಪಿ ಕಡೆಗೆ ಮುಖ ಮಾಡಲಿದ್ದಾರೆ. ಅಲ್ಲದೆ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆ.ಎಸ್. ಈಶ್ವರಪ್ಪ ಅವರಂತಹ ನಾಯಕರು ವಾಪಸ್ ಬಂದರೆ ಪಕ್ಷದ ಬಲ ಮತ್ತಷ್ಟು ಹೆಚ್ಚಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಸಂಘಟನೆ ಹಾಗೂ ಚುನಾವಣಾ ದೃಷ್ಟಿಯಿಂದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯ ಕುರಿತಾಗಿಯೂ ಪಕ್ಷದೊಳಗೆ ಚರ್ಚೆಗಳು ನಡೆಯುತ್ತಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಾಯಕತ್ವಕ್ಕೆ ಒತ್ತು ನೀಡಲಾಗುತ್ತಿದೆ.
ಕಾಂಗ್ರೆಸ್ ಶಾಸಕರ ಮೇಲೆ ಕಣ್ಣು: ಮಾಜಿ ಸಚಿವ ಮುರುಗೇಶ್ ನಿರಾಣಿ ನೀಡಿರುವ ಸುಳಿವಿನ ಪ್ರಕಾರ, ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡಿರುವ ಹಲವು ಹಾಲಿ ಮತ್ತು ಮಾಜಿ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಹಾಗೂ ಸರಿಯಾದ ಸಮಯಕ್ಕೆ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
ರಾಜಕಾರಣದಲ್ಲಿ ಅಧಿಕಾರ ಹಿಡಿಯುವುದು ಕೇವಲ ‘ನಂಬರ್ ಗೇಮ್’ ಆಗಿದ್ದು, ಬಿಜೆಪಿಯ ಎಲ್ಲಾ ನಾಯಕರು ಒಂದೇ ವೇದಿಕೆಯಡಿ ಬಂದರೆ 2028ರಲ್ಲಿ ಅಧಿಕಾರಕ್ಕೆ ಬರುವುದು ಕಷ್ಟವಲ್ಲ ಎಂಬ ವಿಶ್ವಾಸವನ್ನು ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ..
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ನಂತರ, ರಾಜ್ಯ ಬಿಜೆಪಿಯಲ್ಲಿ ಉಂಟಾದ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಒಡೆದ
ಮನೆಯಂತಿರುವ ಪರಿಸ್ಥಿತಿ ಹೈಕಮಾಂಡ್‌ಗೆ ತಲೆನೋವಾಗಿತ್ತು.
ಪ್ರಸ್ತುತ ಸ್ಥಳೀಯ ನಾಯಕರ ಹೇಳಿಕೆಗಳು ಮತ್ತು ಹೈಕಮಾಂಡಿನ ಈ ಮಾಸ್ಟರ್ ಪ್ಲ್ಯಾನ್‌ನಿಂದಾಗಿ ಕೇವಲ ಬಿಜೆಪಿ ಪಾಳಯದಲ್ಲಿ ಮಾತ್ರವಲ್ಲದೆ, ಕಾಂಗ್ರೆಸ್ ಶಿಬಿರದಲ್ಲೂ ಹೊಸ ರಾಜಕೀಯ ಸಂಚಲನ ಮೂಡಿಸಿದೆ. ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಯಾವೆಲ್ಲಾ ದೊಡ್ಡ ಬದಲಾವಣೆಗಳು ಜರುಗಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ, ಹೈಕಮಾಂಡ್ ರೂಪಿಸುತ್ತಿರುವ ಈ ಹೊಸ ರಾಜಕೀಯ ತಂತ್ರಗಾರಿಕೆ ಮುಂಬರುವ ದಿನಗಳಲ್ಲಿ ಕರ್ನಾಟಕ ಬಿಜೆಪಿಯ ಚಿತ್ರಣವನ್ನು ಬದಲಿಸುತ್ತದೆಯೇ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಯಾವ ರೀತಿಯ ಕಂಪನಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

