ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕ್ ಕತ್ತರಿಸುವುದು ಸಾಮಾನ್ಯ. ಆದರೆ ಯುವತಿಯೊಬ್ಬಳು ತನ್ನ ಬರ್ತ್‌ಡೇ ಕೇಕ್ ಮೇಲೆ ಬರೆದಿದ್ದ ಬರಹವನ್ನು ನೋಡಿ ಒಂದೆಡೆ ಅವಕ್ಕಾಗಿದ್ದರೆ, ಮತ್ತೊಂದೆಡೆ ನಗು ತಡೆಯಲಾಗದೆ ಸುಸ್ತಾಗಿದ್ದಾರೆ. ಝೊಮ್ಯಾಟೋ ಮೂಲಕ ಆರ್ಡರ್ ಮಾಡಲಾಗಿದ್ದ ಕೇಕ್ ಮೇಲೆ ಬೇಕರಿಯವರು ಮಾಡಿದ ಎಡವಟ್ಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಡೆಲಿವರಿ ಮೆಸೇಜ್ ಆದ ಕೇಕ್ ಸಂದೇಶ ನಕ್ಷತ್ರ ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಯುವತಿಯ ಸ್ನೇಹಿತರು ಆಕೆಗೆ ಸರ್‌ಪ್ರೈಸ್ ನೀಡಲು ಝೊಮ್ಯಾಟೋ ಮೂಲಕ ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಿದ್ದರು. ಸಾಮಾನ್ಯವಾಗಿ ನಾವು ಆಹಾರ ಆರ್ಡರ್ ಮಾಡುವಾಗ ‘ಮನೆಯ ಬಾಗಿಲಿಗೆ ತನ್ನಿ’ ಅಥವಾ ‘ಸೆಕ್ಯೂರಿಟಿ ಬಳಿ ಬಿಡಿ’ ಎಂಬ ಸೂಚನೆ (Delivery Instruction) ನೀಡುತ್ತೇವೆ. ಈ ಕೇಕ್ ಆರ್ಡರ್ ಮಾಡುವಾಗಲೂ ಸ್ನೇಹಿತರು ‘ಲೀವ್ ಅಟ್ ಸೆಕ್ಯೂರಿಟಿ’ (Leave at security – ಸೆಕ್ಯೂರಿಟಿ ಬಳಿ ಬಿಡಿ) ಎಂಬ ಸೂಚನೆ ನೀಡಿದ್ದರು.
ಆದರೆ ಬೇಕರಿಯವರು ಈ ಸೂಚನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕೇಕ್ ಮೇಲೆ ಬರೆಯಬೇಕಾದ ಶುಭಾಶಯದ ಬದಲು, ಈ ಡೆಲಿವರಿ ಸೂಚನೆಯನ್ನೇ ಐಸಿಂಗ್ ಮೂಲಕ ದೊಡ್ಡದಾಗಿ ಬರೆದು ಕಳುಹಿಸಿದ್ದಾರೆ. ಕೇಕ್ ಬಾಕ್ಸ್ ಓಪನ್ ಮಾಡಿದ ನಕ್ಷತ್ರ, ಅದರ ಮೇಲೆ ‘Happy Birthday’ ಎನ್ನುವ ಬದಲು ‘Leave at security’ ಎಂದು ಬರೆದಿರುವುದನ್ನು ಕಂಡು ಶಾಕ್ ಆಗಿದ್ದಾರೆ.
ವೈರಲ್ ಆದ ವಿಡಿಯೋ ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆದ ಈ ತಮಾಷೆಯ ಎಡವಟ್ಟನ್ನು ಯುವತಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ನನ್ನ ಹುಟ್ಟುಹಬ್ಬದಂದು ನನ್ನ ಸ್ನೇಹಿತ ಝೊಮ್ಯಾಟೋದಲ್ಲಿ ಕೇಕ್ ಆರ್ಡರ್ ಮಾಡಿದ್ದ, ಆದರೆ ಕೇಕ್ ಮಾಡೋನು ನಿಜವಾಗಿಯೂ ಅದರ ಮೇಲೆ ಸೆಕ್ಯೂರಿಟಿ ಬಳಿ ಬಿಡಿ ಅಂತಲೇ ಬರೆದಿದ್ದಾನೆ” ಎಂದು ಯುವತಿ ನಗುತ್ತಾ ಬರೆದುಕೊಂಡಿದ್ದಾರೆ.
ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆ ಈ ವಿಡಿಯೋ ನೋಡಿರುವ ಬಳಕೆದಾರರು ಬೇಕರಿಯವರ ಮುಗ್ಧತೆಗೆ ಅಥವಾ ಅಜಾಗರೂಕತೆಗೆ ನಕ್ಕು ನಲಿದಿದ್ದಾರೆ. “ಕನಿಷ್ಠ ಪಕ್ಷ ಆ ಕೇಕ್ ಅನ್ನಾದರೂ ಸೆಕ್ಯೂರಿಟಿ ಬಳಿ ಬಿಡದೆ ನಿಮ್ಮ ಮನೆಗೆ ತಲುಪಿಸಿದ್ದಾರಲ್ಲ ಅದೇ ಪುಣ್ಯ” ಎಂದು ಕೆಲವರು ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ಆನ್‌ಲೈನ್‌ನಲ್ಲಿ ಇನ್ಮುಂದೆ ಇನ್ಸ್ಟ್ರಕ್ಷನ್ ನೀಡುವಾಗ ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ್ದಾರೆ. ಏನೇ ಇರಲಿ, ಈ ಸಣ್ಣ ತಪ್ಪು ಮಾತ್ರ ಯುವತಿಯ ಹುಟ್ಟುಹಬ್ಬವನ್ನು ಮರೆಯಲಾಗದಂತೆ ಮಾಡಿದೆ.

