ಬೆಂಗಳೂರು : ಬೆಂಗಳೂರಿನ ಹೆಸರಘಟ್ಟದಲ್ಲಿರುವ ಸರ್ಕಾರಿ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್(ಹಕ್ಕಿಜ್ವರ) ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಾವಿರಾರು ಕೋಳಿಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗಿದೆ. ತಮಿಳುನಾಡು ಮತ್ತು ಬಿಹಾರದ ನಂತರ ಕರ್ನಾಟಕದಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದು ಈ ವರ್ಷ ರಾಜ್ಯದಲ್ಲಿ ವರದಿಯಾದ ಮೊದಲ ಪ್ರಕರಣವಾಗಿದೆ. ಹಕ್ಕಿಗಳಿಂದ ಈ ವೈರಸ್ ಹರಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ವೈಜ್ಞಾನಿಕ ವಿಲೇವಾರಿ: ಹಕ್ಕಿ ಜ್ವರ ದೃಢಪಟ್ಟ ತಕ್ಷಣ, ಮೇ 15 ರಂದು ಅಧಿಕಾರಿಗಳ ಸಮ್ಮುಖದಲ್ಲಿ ಕೋಳಿಗಳನ್ನು ಮತ್ತು ಮೊಟ್ಟೆಗಳನ್ನು ಹೂತು ಹಾಕುವ ಮೂಲಕ ನಾಶಪಡಿಸಲಾಗಿದೆ. ಸೋಂಕು ಪತ್ತೆಯಾದ ಸ್ಥಳದಿಂದ 1 ರಿಂದ10 ಕಿ.ಮೀ. ವ್ಯಾಪ್ತಿಯನ್ನು ಕಣ್ಗಾವಲು ಪ್ರದೇಶ ಎಂದು ಘೋಷಿಸಲಾಗಿದೆ.
ತಪಾಸಣೆ: ಮುಂದಿನ ಎರಡು ತಿಂಗಳುಗಳ ಕಾಲ ಪ್ರತಿ 15 ದಿನಗಳಿಗೊಮ್ಮೆ ಈ ಭಾಗದ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನ ಲ್ಯಾಬ್‌ಗೆ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ.
ಚಿಕನ್ಸೆಂಟರ್‌ಗಳ ಮೇಲೆ ನಿಗಾ: ಫಾರಂ ಸುತ್ತಮುತ್ತಲಿನ 54 ಚಿಕನ್ಸೆಂಟರ್ ಮತ್ತು 36 ಹಳ್ಳಿಗಳನ್ನು ಗುರುತಿಸಲಾಗಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.10 ಕೋಳಿ ಸಾಕಣೆಗಾರರನ್ನು ಕ್ವಾರಂಟೈನ್ ಮಾಡಲಾಗಿದ್ದು, ಬಿಸಿಲಿನ ತಾಪದಿಂದಾಗಿ ಬೇಸಿಗೆಯಲ್ಲಿ ಹಕ್ಕಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಹಕ್ಕಿಗಳಿಂದ ಕೋಳಿಗಳಿಗೆ ಈ ಜ್ವರ ಹಬ್ಬಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಅಧಿಕಾರಿಗಳ ಹೇಳಿಕೆ
“ಸದ್ಯಕ್ಕೆ ಭಯಪಡುವ ಅಗತ್ಯವಿಲ್ಲ. ಸೋಂಕು ಪತ್ತೆಯಾದ ಫಾರಂನ 1 ಕಿ.ಮೀ ವ್ಯಾಪ್ತಿಯಲ್ಲಿ ಜನವಸತಿ ಇಲ್ಲದ ಕಾರಣ ಹಳ್ಳಿಗಳಲ್ಲಿ ಕೋಳಿ ನಾಶ ಮಾಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.” — ಡಾ. ಪಿ. ಶ್ರೀನಿವಾಸ್, (ನಿರ್ದೇಶಕರು, ಪಶುಪಾಲನಾ ಇಲಾಖೆ ) ತಿಳಿಸಿದ್ದಾರೆ.
ಗಮನಿಸಿ: ಸಾರ್ವಜನಿಕರು ಕೋಳಿ ಮಾಂಸ ಅಥವಾ ಮೊಟ್ಟೆಯನ್ನು ಬಳಸುವಾಗ ಸರಿಯಾಗಿ ಬೇಯಿಸಿ (High Temperature) ಬಳಸುವಂತೆ ತಜ್ಞರು ಸಲಹೆ ನೀಡುತ್ತಾರೆ.

